ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ ಭಾರತ ಸೇರಿದಂತೆ 91 ರಾಷ್ಟ್ರಗಳಿಗೆ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಇದೀಗ ಭಾರತದಲ್ಲಿ ಹೊಸ ರೂಪಾಂತರಿ ಪ್ರಕರಣಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 5ರಂದು ಮೊದಲ ಒಮಿಕ್ರಾನ್ ಪ್ರಕರಣ ದಾಖಲಿಸಿದ ದೆಹಲಿಯಲ್ಲಿ ಇಂದು ಮತ್ತೆ 12 ಕೇಸ್ ಪತ್ತೆಯಾಗಿವೆ. ರಾಷ್ಟ್ರ ರಾಜಧಾನಿಯ ಒಮಿಕ್ರಾನ್ ಸೋಂಕಿತರ ಸಂಖ್ಯೆ 22ಕ್ಕೆ ಹೆಚ್ಚಳವಾಗಿದೆ. ಈ ಪೈಕಿ ಹತ್ತು ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: Omicron: ಕರ್ನಾಟಕದಲ್ಲಿ ಮತ್ತೆ 5 ಒಮಿಕ್ರಾನ್ ಪತ್ತೆ, ಬೆಳಗಾವಿಯಲ್ಲೂ ಕಂಡುಬಂತು ಹೊಸ ರೂಪಾಂತರಿ!
ಭಾರತದಲ್ಲಿ ಒಮಿಕ್ರಾನ್ ಪ್ರಕರಣಗಳು
ಮಹಾರಾಷ್ಟ್ರದಲ್ಲೇ ಅತಿ ಹೆಚ್ಚು ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ 32 ಪ್ರಕರಣ ವರದಿಯಾಗಿವೆ. 17 ಕೇಸ್ಗಳೊಂದಿಗೆ ರಾಜಸ್ಥಾನ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22, ಕರ್ನಾಟಕ-8, ಕೇರಳ-5, ಗುಜರಾತ್ -5, ತೆಲಂಗಾಣ-8, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಚಂಡೀಗಢದಲ್ಲಿ ತಲಾ ಒಂದೊಂದು ಕೇಸ್ ಪತ್ತೆಯಾಗಿವೆ. ಇನ್ನೆರಡು ಪ್ರಕರಣಗಳ ಬಗ್ಗೆ ನಿಖರ ಮಾಹಿತಿಯಿಲ್ಲ.