ನವಿಮುಂಬೈ: ಖಾರ್ಘರ್‌ನ ಪಾಂಡವಕಡ ಜಲಪಾತವನ್ನು ಅಪಾಯಕಾರಿ ಜಲಪಾತ ಎಂದು ಪೊಲೀಸರು ಮತ್ತು ಆಡಳಿತ ಮಂಡಳಿ ಘೋಷಿಸಿದೆ. ಅಲ್ಲದೇ ಜಲಪಾತಕ್ಕೆ ಭೇಟಿ ನೀಡದಂತೆ ತಡೆಯಲು ಮಳೆಗಾಲದ ಆರಂಭದಲ್ಲಿಯೇ ಪೊಲೀಸರು ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಎಂಜಾಯ್ ಮಾಡಲು ಜಲಪಾತಕ್ಕೆ ತೆರಳಿ ಭಾರಿ ಮಳೆ ಹಿನ್ನೆಲೆ ಅಪಾಯಕ್ಕೆ ಸಿಲುಕಿದ 117 ಮಂದಿಯನ್ನು ನವೀ ಮುಂಬೈ ಪೊಲೀಸರು ಹಾಗೂ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಒಟ್ಟು 15 ಅಗ್ನಿಶಾಮಕ ದಳಗಳು ಆಗಮಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿ ಸಿಲುಕಿದ್ದ 78 ಮಹಿಳೆಯರು 5 ಮಕ್ಕಳು ಸೇರಿ ಎಲ್ಲರನ್ನೂ ರಕ್ಷಿಸಿವೆ. ಮುಂಬೈನಲ್ಲಿ ಈಗಾಗಲೇ ವಿಪರೀತ ಮಳೆಯಾಗುತ್ತಿದೆ. ಆದರೂ ಭಾನುವಾರ ರಜಾ ದಿನವಾಗಿರುವುದರಿಂದ ಜಲಪಾತಕ್ಕೆ ಹೋಗುವುದನ್ನು ನಿಷೇಧಿಸಿದ್ದರೂ ಪ್ರವಾಸಿಗರು ನಿಯಮ ಉಲ್ಲಂಘಿಸಿ ಖಾರ್ಘರ್ನಲ್ಲಿರುವ ಜಲಪಾತಕ್ಕೆ ಹೋಗಿದ್ದರು.
ಧಾರಾಕಾರ ಮಳೆಯಿಂದಾಗಿ, ಜಲಪಾತದ ನೀರಿನ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗಿ ಅವರೆಲ್ಲಾ ಅಪಾಯಕ್ಕೆ ಸಿಲುಕಿದ್ದರು. ಜಲಪಾತದಿಂದ ಮರಳಲು ನೀರಿನ ಹರಿವು ಕಡಿಮೆಯಾಗಬಹುದೆಂದು ಕಾಯ್ದರೂ ಮಳೆ ಹೆಚ್ಚಾದ ಹಿನ್ನೆಲೆ ನೀರಿನ ಪ್ರಮಾಣ ಸಹ ಹೆಚ್ಚುತ್ತಲೇ ಇತ್ತು. ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ತೆರಳಿ ಜಲಪಾತದ ಬಳಿ ಸಿಲುಕಿದ್ದ 117 ಜನರನ್ನು ರಕ್ಷಣೆ ಮಾಡಿದ್ದಾರೆ.
ಖಾರ್ಘರ್‌ನ ಪಾಂಡವಕಡ ಮತ್ತು ಸುತ್ತಮುತ್ತಲಿನ ಎಲ್ಲ ಜಲಪಾತಗಳು ಅಪಾಯಕಾರಿ ಎನ್ನಲಾಗಿದ್ದು, ಈ ಹಿಂದೆ ಸಹ ಇಲ್ಲಿನ ಜಲಪಾತಗಳಲ್ಲಿ ಬಿದ್ದು ಅನೇಕ ಯುವಕರು ಸಾವನ್ನಪ್ಪಿದ್ದಾರೆ.