ಬರೇಲಿ(ಉತ್ತರಪ್ರದೇಶ) : ಯುಪಿಎಸ್ಸಿ ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಪಡೆದಿರುವ ಐಶ್ವರ್ಯ ವರ್ಮಾ ಹುಟ್ಟಿದ್ದು ಮಧ್ಯಪ್ರದೇಶದಲ್ಲಾದರೂ, ವಾಸಿಸುತ್ತಿರುವುದು ಉತ್ತರಪ್ರದೇಶದ ಬರೇಲಿಯಲ್ಲಿ. ಐಎಎಸ್ ಪಾಸಾಗಲೇಬೇಕು ಎಂದು ಪಣತೊಟ್ಟಿದ್ದ ಐಶ್ವರ್ಯ ವರ್ಮಾ, ನಾಲ್ಕನೇ ಪ್ರಯತ್ನದಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದಿದ್ದಾರೆ.
ತಂದೆ ಬ್ಯಾಂಕ್ ಮ್ಯಾನೇಜರ್, ತಾಯಿ ನಿವೃತ್ತ ಶಿಕ್ಷಕಿ, ಸಹೋದರಿ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದಾರೆ. ಐಶ್ವರ್ಯ ವರ್ಮಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲರಾಗಿದ್ದರು. ಛಲ ಬಿಡದ ಅವರು ಕುಟುಂಬಸ್ಥರ ಪ್ರೋತ್ಸಾಹದಿಂದ 4ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಬಾರಿ ಊಹಿಸದ ರೀತಿಯಲ್ಲಿ ದೇಶಕ್ಕೇ 4ನೇ ರ್ಯಾಂಕ್ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಬರೇಲಿಯ ಪಿಲಿಭಿತ್ ಬೈಪಾಸ್ ನಿವಾಸಿಯಾಗಿರುವ ಐಶ್ವರ್ಯ ವರ್ಮಾ ಅವರ ತಂದೆ ವಿವೇಕ್ ವರ್ಮಾ ಅವರು ಬ್ಯಾಂಕ್ ಆಫ್ ಬರೋಡಾದಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದಾರೆ. ಅವರ ತಾಯಿ ವಿನೀತಾ ವರ್ಮಾ ಶಿಕ್ಷಕಿಯಾಗಿದ್ದು, ನಿವೃತ್ತರಾಗಿದ್ದಾರೆ.
ಟಾಪರ್ ಐಶ್ವರ್ಯ ವರ್ಮಾ ಅವರು ಹುಟ್ಟಿದ್ದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ. ಪ್ರಸ್ತುತ ಅವರು ಉತ್ತರಪ್ರದೇಶ ಬರೇಲಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಐಶ್ವರ್ಯ ವರ್ಮಾ ಅವರು ಉತ್ತರಾಖಂಡದ ರುದ್ರಪುರದಲ್ಲಿರುವ ಹೋಲಿ ಚೈಲ್ಡ್ ಸ್ಕೂಲ್‌ನಿಂದ ಪ್ರೌಢಶಿಕ್ಷಣ ಮತ್ತು ಮಧ್ಯಂತರ ಶಿಕ್ಷಣವನ್ನು ಮಾಡಿದ್ದಾರೆ.
2017ರಲ್ಲಿ ಪಂತನಗರ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಬಿ.ಟೆಕ್ ಮುಗಿಸಿದ್ದಾರೆ. ನಂತರ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಇದಕ್ಕಾಗಿ ವರ್ಮಾ 2018ರಲ್ಲಿ ದೆಹಲಿಯಲ್ಲಿ 1 ವರ್ಷ ತರಬೇತಿ ಪಡೆದುಕೊಂಡಿದ್ದಾರೆ. ತರಬೇತಿ ಬಳಿಕ ಮನೆಯಲ್ಲೇ ಸ್ವಅಧ್ಯಯನ ನಡೆಸಿದ್ದರು.
3 ಬಾರಿ ಫೇಲ್ 4ನೇ ಬಾರಿ ಸಕ್ಸಸ್ : ಐಶ್ವರ್ಯ ವರ್ಮಾ ಅವರು 2018ರಿಂದ ಈವರೆಗೂ 4 ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದಾರೆ. ಮೂರು ಬಾರಿ ಇದರಲ್ಲಿ ವಿಫಲರಾಗಿದ್ದರು. ಕುಟುಂಬಸ್ಥರ ಪ್ರೋತ್ಸಾಹ ಮತ್ತು ಐಎಎಸ್ ಆಗುವ ಕನಸಿನ ಹಿಂದೆ ಬಿದ್ದ ಐಶ್ವರ್ಯ 4ನೇ ಪ್ರಯತ್ನದಲ್ಲಿ ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿ 4ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಓದಿಗೆ ಸಮಯ ಮಿತಿ ಇಲ್ಲ: ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ನಡೆಸುವ ವೇಳೆ ಐಶ್ವರ್ಯ ವರ್ಮಾ ಅವರು ಓದಿಗಾಗಿ ಸಮಯ ನಿಗದಿ ಮಾಡಿರಲಿಲ್ಲ ಎಂಬುದು ವಿಶೇಷ. ದಿನವೂ ಕನಿಷ್ಠ 8 ರಿಂದ 10 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಒಂದು ವಿಷಯದ ಕುರಿತಾಗಿ ಪೂರ್ಣ ಓದಿದ ಬಳಿಕವೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಗುರಿ ಆಧಾರಿತ ಅಧ್ಯಯನದ ಸೂತ್ರವೇ ನನ್ನ ಸಕ್ಸಸ್ ಮಂತ್ರ ಎನ್ನುತ್ತಾರೆ ಐಶ್ವರ್ಯ ವರ್ಮಾ.
ಕ್ರಿಕೆಟ್ ಅಂದ್ರೆ ಇಷ್ಟ : ಯುಪಿಎಸ್ಸಿ ಟಾಪರ್ ಐಶ್ವರ್ಯ ವರ್ಮಾ ಅವರು ಅಧ್ಯಯನದ ನಂತರ, ರಿಫ್ರೆಶ್ ಆಗಲು ಕ್ರಿಕೆಟ್ ಆಡುತ್ತಿದ್ದರಂತೆ. ಅವರಿಗೆ ಮೊದಲಿನಿಂದಲೂ ಕ್ರಿಕೆಟ್ ಇಷ್ಟದ ಆಟ. ಸಚಿನ್ ತೆಂಡೂಲ್ಕರ್ ಅವರ ನೆಚ್ಚಿನ ಕ್ರಿಕೆಟಿಗ. ವಿದ್ಯಾರ್ಥಿ ಜೀವನದಲ್ಲಿ ಕ್ರಿಕೆಟಿಗನಾಗಬೇಕೆಂಬ ಆಸೆಯೂ ಅವರಲ್ಲಿತ್ತು. ಬಳಿಕ ಓದಿನೆಡೆಗೆ ವಾಲಿದ್ದರಿಂದ ಕ್ರಿಕೆಟ್ ಕೈಬಿಟ್ಟೆ ಎನ್ನುತ್ತಾರೆ ವರ್ಮಾ.
ಮಗನ ಸಾಧನೆಗೆ ತಂದೆಯ ಸಂತಸ : ಮಗ ಯುಪಿಎಸ್ಸಿಯಲ್ಲಿ ದೇಶಕ್ಕೇ 4ನೇ ರ್ಯಾಂಕ್ ಗಳಿಸಿದ್ದಕ್ಕೆ ತಂದೆ ವಿವೇಕ್ ವರ್ಮಾ ಅವರ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ. ಈ ಬಾರಿ ತನ್ನ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾನೆ ಎಂದು ಊಹಿಸಿದ್ದೆ. ಆದರೆ, ದೇಶಕ್ಕೆ ನಾಲ್ಕನೇ ರ್ಯಾಂಕ್ ಬರುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರೆ, ಮಗನ ಈ ಸಾಧನೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ತಾಯಿ ವಿನಿತಾ ವರ್ಮಾ.
ಓದಿ : ಸೋಲೇ ಗೆಲುವಿನ ಮೆಟ್ಟಿಲು : ಯಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಬಸ್ ಡ್ರೈವರ್ ಮಗಳು