ನವದೆಹಲಿ: ಕಳೆದ ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು (three farm laws) ರದ್ದು ಮಾಡುವುದಾಗಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಪ್ರಧಾನಿ ಅವರ ಈ ನಿರ್ಧಾರದಿಂದ ಕಳೆದೊಂದು ವರ್ಷದಿಂದ ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯಲ್ಲಿ ಕೊರೆಯುವ ಚಳಿ, ಗಾಳಿ, ಬಿಸಿಲು ಮಳೆ ಎನ್ನದೆ ಪ್ರತಿಭಟನೆ ಮಾಡುತ್ತಿರುವ ರೈತರ ನಿಟ್ಟುಸಿರು ಬಿಡುವಂತಾಗಿದೆ.
ಮುಂಬರುವ ಸಂಸತ್ ಅಧಿವೇಶನದಲ್ಲಿ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ ಪ್ರಧಾನಿ ಮೋದಿ (Narendra Modi), ಪ್ರತಿಭಟನೆಯ ಭಾಗವಾಗಿರುವ ಎಲ್ಲಾ ರೈತರು ಈಗ ನಿಮ್ಮ ಮನೆಗೆ ಹೋಗಿ, ನಿಮ್ಮ ಪ್ರೀತಿಪಾತ್ರರನ್ನು ಸೇರಿಕೊಳ್ಳಿ, ನಿಮ್ಮ ಜಮೀನುಗಳಿಗೆ ಹೋಗಿ ಎಂದು ಮನವಿ ಮಾಡಿದ್ದರು. ಅಲ್ಲದೆ, ನಾವು ಹೊಸ ಆರಂಭವನ್ನು ಮಾಡೋಣ ಮತ್ತು ಮುಂದುವರಿಯೋಣ ಎಂದಿದ್ದಾರೆ.
ರೈತರೊಂದಿಗೆ ಕಾದು ನೋಡುವ ಸರ್ಕಾರದ ತಂತ್ರ ನಿಜಕ್ಕೂ ದೊಡ್ಡ ತಪ್ಪಾಗಿರಬಹುದು. ಕಳೆದ ಒಂದು ವರ್ಷದಿಂದ ಪಟ್ಟು ಬಿಡದೆ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡಿದ್ದ ರೈತರಿಗೆ ತಾಳ್ಮೆ ನಿಜಕ್ಕೂ ಮೆಚ್ಚುವಂತದ್ದು. ಅನ್ನದಾತರಿಗೆ ಕಾಯುವ ಗುಣ ಜೀವನದ ಭಾಗವೇ ಆಗಿದೆ. ಯಾಕೆಂದರೆ ಹೊಲದಲ್ಲಿ ಬಿತ್ತುವಾಗ ಮುಂಗಾರು ಮಳೆಗಾಗಿ ಕಾಯುತ್ತಾರೆ, ಬೆಳೆಗಾಗಿ ಕಾಯುತ್ತಾರೆ. ಪ್ರತಿಯೊಬ್ಬ ರೈತನ ಗುಣದಲ್ಲೂ ಸಹನೆ ಅಡಕವಾಗಿರುತ್ತದೆ.
ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ಘೋಷಣೆ ಮಾಡಿದ್ರೂ ಧರಣಿ ವಾಪಸ್ ಇಲ್ಲ
ಸದ್ಯ ಪ್ರಧಾನಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರೂ ರೈತರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆಯುತ್ತಿಲ್ಲ. ಇದೇ ಸಂಬಂಧ ಅವರು ಪ್ರಮುಖವಾಗಿ ಐದು ಅಜೆಂಡಾಗಳನ್ನು ಸಿದ್ದಪಡಿಸಿದ್ದಾರೆ. ಇದರ ಭಾಗವಾಗಿ ನವೆಂಬರ್ 22 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ರ‍್ಯಾಲಿ, ಕೃಷಿ ಕಾಯ್ದೆಗಳನ್ನು ವಿರೋಧಿ ಆರಂಭಿಸಿದ್ದ ಪ್ರತಿಭನಟನೆ 1 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 26 ರಂದು ಬೃಹತ್ ಸಮಾವೇಶ ಹಾಗೂ ನವೆಂಬರ್ 29 ರಂದು ಸಂಸತ್ತಿನತ್ತ ಟ್ರ್ಯಾಕ್ಟರ್ ರ‍್ಯಾಲಿ ಮಾಡುವುದಾಗಿ ಘೋಷಿಸಿದ್ದಾರೆ.
ರೈತರ ಆ ಆರು ಅಜೆಂಡಾಗಳು...
1. 2020ರ ನವೆಂಬರ್ 26ರಂದು ರಾಷ್ಟ ರಾಜಧಾನಿ ದೆಹಲಿ ಗಡಿಯಲ್ಲಿ ಆರಂಭಿಸಿದ್ದ ಪ್ರತಿಭಟನೆಯನ್ನು ರೈತರು ಮುಂದುವರೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವಂತೆ ನಿಜವಾಗಿಯೂ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ಕಾನೂನಾತ್ಮಕವಾಗಿ ಪಾವಸ್ ಪಡೆಯುವವರೆಗೆ ಕಾಯುವುದು.
ಭಾರತದ ಕೃಷಿ ವಲಯದಲ್ಲಿನ ಹಳೆಯ ಪದ್ಧತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯಿದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ ಹಾಗೂ ಅಗತ್ಯ ಸರಕುಗಳು (ತಿದ್ದುಪಡಿ) ಕಾಯ್ದೆಗಳನ್ನು ಸರ್ಕಾರ ಕಾನೂನಾತ್ಮಕವಾಗಿ ಜಾರಿಗೆ ತಂದಿತ್ತು.
2. ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನಿಗೆ ಒತ್ತಾಯಿಸಿದ್ದಾರೆ.
ಸರ್ಕಾರ ರೈತರಿಂದ ಖರೀದಿಸುವ ಹಾಗೂ ಈಗಾಗಲೇ ನಿರ್ವಹಿಸಲಾಗದ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅಕ್ಕಿ ಮತ್ತು ಗೋಧಿ ಮೇಲೆ ಮಾತ್ರ ಎಂಎಸ್‌ಪಿ ಪರಿಣಾಮ ಬೀರುತ್ತದೆ. ಎಂಎಸ್‌ಪಿ ಸ್ಥಿರೀಕರಣವು ಕೃಷಿ ರಫ್ತುಗಳು ಸ್ಪರ್ಧಾತ್ಮಕವಲ್ಲದ ಸ್ಥಿತಿಗೆ ಕಾರಣವಾಗಬಹುದು. ಏಕೆಂದರೆ ನಿಗದಿತ ಖಚಿತವಾದ ಬೆಲೆಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗಿಂತ ಹೆಚ್ಚಾಗಿರುತ್ತದೆ.
3. ವಿದ್ಯುತ್ (ತಿದ್ದುಪಡಿ) ಮಸೂದೆ-2020ಯನ್ನು ಹಿಂಪಡೆಯುವಂತೆ ರೈತರು ಒತ್ತಾಯಿಸಿದ್ದಾರೆ. ಈ ಹೊಸ ಮಸೂದೆಯಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳಿಂದ ರೈತರಿಗೆ ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ನೀಡುತ್ತಿದ್ದ ಉಚಿತ ವಿದ್ಯುತ್ ಕಡಿತವಾಗಲಿದೆ.
4. ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ 700 ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
5. ಚಳವಳಿಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಮತ್ತು ಎಫ್‌ಐಆರ್‌ಗಳನ್ನು ಹಿಂಪಡೆಯುವುದು.
6. 2021ರ ಅಕ್ಟೋಬರ್ 3 ರಂದು ಉತ್ತರ ಪ್ರದೇಶ ಲಖಿಂಪುರ್ ಖೇರಿಯಲ್ಲಿ ನಡೆದಿದ್ದ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ರೈತರ ಪ್ರತಿಭಟನೆ ಮೆರವಣಿಗೆ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಅವರ ಪುತ್ರ ಆಶೀಶ್ ಮಿಶ್ರಾ ಅವರಿಂದ ಕಾರು ರೈತರ ಮೆರವಣಿಗೆ ಮೇಲೆ ಹರಿದ ಪರಿಣಾಮ ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು.
ಈಗಾಗಲೇ ಹಲವಾರು ರೈತ ಸಂಘಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha), ಮಿಶ್ರಾ ಅವರನ್ನು ಪದಚ್ಯುತಗೊಳಿಸಿ ಬಂಧಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಲ್ಲದೆ, ಘಟನೆಯ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡವನ್ನು (SIT) ರಚನೆಗೆ ಕೋರಿದೆ.