ಉದಯ್‌ಪುರ (ರಾಜಸ್ಥಾನ): ಹಲ್ಲುಜ್ಜುವ ವೇಳೆ ವ್ಯಕ್ತಿಯೊಬ್ಬ 12 ಸೆಂ.ಮೀ ಉದ್ದದ ಟೂತ್ ಬ್ರಷ್ ನುಂಗಿರುವ ವಿಚಿತ್ರ ಪ್ರಕರಣ ಉದಯಪುರದ ಚಿತ್ತೋರ್ಗಢ್ನಲ್ಲಿ ಬೆಳಕಿಗೆ ಬಂದಿದೆ. ನಾಣ್ಯ ಮತ್ತು ಚಿಕ್ಕ - ಪುಟ್ಟ ವಸ್ತುಗಳನ್ನು ಮಕ್ಕಳು ನುಂಗುವುದನ್ನು ನಾವು ಕೇಳಿದ್ದೇವೆ. ಆದರೆ, ವಯಸ್ಕರೊಬ್ಬರು ಆಕಸ್ಮಿಕವಾಗಿ ಹಲ್ಲುಜ್ಜುವ ಬ್ರಷ್ ನುಂಗಿದ್ದನ್ನು ಕಂಡು ವೈದ್ಯರೇ ಆಶ್ಚರ್ಯ ಚಕಿತರಾಗಿದ್ದಾರೆ. ಉದಯಪುರದ ಖಾಸಗಿ ಆಸ್ಪತ್ರೆಯ ವೈದ್ಯರು ಯಾವುದೇ ಶಸ್ತ್ರ ಚಿಕಿತ್ಸೆ (Surgery) ಮಾಡದೇ ಈ ಟೂತ್ ಬ್ರಷ್ ಅನ್ನು ಆತನ ಹೊಟ್ಟೆಯಿಂದ ತೆಗೆದಿದ್ದಾರೆ. ಈ ಮೂಲಕ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಏನಿದು ವಿಷಯ?: 53 ವರ್ಷದ ಚಿತ್ತೋರ್‌ಗಢ ನಿವಾಸಿ ಗೋಪಾಲ್ ಸಿಂಗ್ ರಾವ್ ಮಂಗಳವಾರ ಬೆಳಗ್ಗೆ ಎಂದಿನಂತೆ ಎದ್ದ ಬಳಿಕ ಹಲ್ಲುಜ್ಜುತ್ತಿದ್ದರು. ಹಲ್ಲುಜ್ಜುವ ವೇಳೆ ಗಂಟಲು ಮತ್ತು ಬಾಯಿಯನ್ನು ಶುಚಿಗೊಳಿಸುತ್ತಾ ಟೂತ್ ಬ್ರಷ್ ಅನ್ನೇ ನುಂಗಿದ್ದಾರೆ. ಬ್ರಷ್ ಗಂಟಲಿನಲ್ಲಿ ಸಿಲುಕಿದ್ದರಿಂದ ವಾಕರಿಕೆಯೂ ಆಗಿದೆ. ಏನಾಯಿತು ಎಂದು ಕ್ಷಣ ಹೊತ್ತು ನೋಡಿಕೊಳ್ಳುವಷ್ಟರಲ್ಲಿ ಗಂಟಲಿನಲ್ಲಿದ್ದ ಬ್ರಷ್ ಆತನ ಹೊಟ್ಟೆಗೆ ಜಾರಿದೆ. ಇದರಿಂದ ಭಯಗೊಂಡ ಗೋಪಾಲ್ ಸಿಂಗ್ ರಾವ್, ಹೊಟ್ಟೆಯ ಆಳಕ್ಕೆ ಜಾರಿದ್ದ ಬ್ರಷ್ ಅನ್ನು ತೆಗೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಎಲ್ಲ ರೀತಿಯ ಪ್ರಯತ್ನಗಳು ವಿಫಲಗೊಂಡ ಬಳಿಕ ಆತನ ಸಂಬಂಧಿಕರು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿ ಬ್ರಷ್ ಅನ್ನು ತೆಗೆಯಲು ಸಾಧ್ಯವಾಗದ ಕಾರಣ, ಸಂಬಂಧಿಕರು ಅವರನ್ನು ಉದಯಪುರದ ಜಿಬಿಎಚ್ ಅಮೆರಿಕನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಅಚ್ಚರಿಯ ಘಟನೆ ಕಂಡ ಜಿಬಿಎಚ್ ಆಸ್ಪತ್ರೆಯ ವೈದ್ಯರು, ತಕ್ಷಣ ರಾವ್ ಅವರ ಸಿಟಿ ಸ್ಕ್ಯಾನ್ ಮಾಡಿಸಿದ್ದಾರೆ. ಈ ವೇಳೆ, ಟೂತ್ ಬ್ರಷ್ ಹೊಟ್ಟೆಯ ಮೇಲ್ಭಾಗದಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಆಸ್ಪತ್ರೆಯ ನುರಿತ ಶಸ್ತ್ರಚಿಕಿತ್ಸಕ ಹಾಗೂ ಬೇರಿಯಾಟ್ರಿಕ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಶಶಾಂಕ್ ಜೆ ತ್ರಿವೇದಿ ಎಂಡೋಸ್ಕೋಪಿಕ್ ವಿಧಾನದಿಂದ ಅದನ್ನು ತೆಗೆದಿದ್ದಾರೆ. ಅವರೊಂದಿಗೆ ಅರಿವಳಿಕೆ ವಿಭಾಗದ ಡಾ. ತರುಣ್ ಭಟ್ನಾಗರ್ ಮತ್ತು ಡಾ. ವಿಕಾಸ್ ಅಗರ್ವಾಲ್ ಸಾಥ್ ನೀಡಿದ್ದಾರೆ. ಯಾವುದೇ ಶಸ್ತ್ರ ಚಿಕಿತ್ಸೆಗೊಳಪಡಿಸಿದೇ ರೋಗಿಯ ಬಾಯಿಯ ಮೂಲಕ 12 ಸೆಂ.ಮೀ ಟೂತ್ ಬ್ರಷ್ ಅನ್ನು ತೆಗೆಯುವ ಮೂಲಕ ಸಾವಿನ ಹೊಸ್ತಿಲಲ್ಲಿದ್ದ ವ್ಯಕ್ತಿಗೆ ಮರುಜೀವ ನೀಡಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ.ಶಶಾಂಕ್, ಇಡೀ ಪ್ರಪಂಚದಲ್ಲಿ ಇದುವರೆಗೆ ಟೂತ್ ಬ್ರಷ್ ನುಂಗಿದ 50 ಘಟನೆಗಳು ನಡೆದಿವೆ. ಈ ಹಿಂದೆ 2019 ರಲ್ಲಿ ದೆಹಲಿಯ ಏಮ್ಸ್‌ನಲ್ಲಿ ಇದೇ ರೀತಿಯ ಒಂದು ವರದಿಯಾಗಿದೆ. ಆದರೆ, ಇದು ರಾಜಸ್ಥಾನದ ಮೊದಲ ಟೂತ್ ಬ್ರಷ್ ನುಂಗುವ ಪ್ರಕರಣವಾಗಿದೆ. ಯಾವುದೇ ಶಸ್ತ್ರ ಚಿಕಿತ್ಸೆಗೊಳಪಡಿಸಿದೇ ಎಂಡೋಸ್ಕೋಪಿಕ್ ಮೂಲಕ ಹೊಟ್ಟೆಯಲ್ಲಿದ್ದ ಬ್ರಷ್ ಅನ್ನು ತೆಗೆಯಲಾಗಿದೆ.
ಆರಂಭದಲ್ಲಿ ನಮಗೂ ಅಚ್ಚರಿ ಮತ್ತು ಸವಾಲು ಅನ್ನಿಸಿತು. ಆದರೆ, ಸಿಟಿ ಸ್ಕ್ಯಾನ್ ಮಾಡಿಸಿದ ಬಳಿಕ ಎಂಡೋಸ್ಕೋಪಿಕ್ ವಿಧಾನದಿಂದ ಬ್ರಷ್ ತೆಗೆಯಬಹುದೆಂದು ನಿರ್ಧಾರಕ್ಕೆ ಬಂದೆವು. ಹಾಗೆಯೇ ಮಾಡಿದೆವು. ವ್ಯಕ್ತಿಯನ್ನು ಒಂದು ದಿನ ಐಸಿಯುನಲ್ಲಿಟ್ಟ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಈ ಪ್ರಕರಣವನ್ನು ಜನರಲ್ ಆಫ್ ಸರ್ಜರಿಯಲ್ಲಿ ಪ್ರಕಟಿಸಲು ಮತ್ತು WHO (ವಿಶ್ವ ಆರೋಗ್ಯ ಸಂಸ್ಥೆ) ದಾಖಲೆಗಳಲ್ಲಿ ನೋಂದಣಿಗಾಗಿ ಕಳುಹಿಸಲಾಗುತ್ತದೆ ಎಂದು ಘಟನೆ ಬಗ್ಗೆ ವಿವರಣೆ ನೀಡಿದರು.
ಇದನ್ನೂ ಓದಿ: Obesity Problem: ಭಾರತೀಯರಲ್ಲಿ ಹೆಚ್ಚುತ್ತಿದೆ ಸ್ಥೂಲಕಾಯದ ಸಮಸ್ಯೆ.. ಈ ಜನರು ಎಚ್ಚರ ವಹಿಸುವುದು ಅಗತ್ಯ