ನವದೆಹಲಿ: ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುವ "ಟೂಲ್ಕಿಟ್" ಹರಡುವಲ್ಲಿ ಪಾತ್ರ ವಹಿಸಿದ್ದಕ್ಕಾಗಿ ದೆಹಲಿ ಸೈಬರ್ ಸೆಲ್ ಪೊಲೀಸರು ಬೆಂಗಳೂರಿನ 21 ವರ್ಷದ ಯುವತಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತ ದಿಶಾ ರವಿ ಎಂಬಾಕೆ ಬೆಂಗಳೂರಿನಲ್ಲಿ ನೆಲೆಸಿದ್ದು, ಈಕೆ ಪರಿಸರ ಕಾರ್ಯಕರ್ತೆಯಾಗಿದ್ದಾಳೆ (climate activist) ಎನ್ನಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಗಲಭೆಗೆ ಪ್ರಚೋದನೆ ನೀಡುವ ಟೂಲ್ಕಿಟ್ ಪ್ರಚಾರ ಮಾಡುವಲ್ಲಿ ಈಕೆ ಪ್ರಮುಖ ಪಾತ್ರ ವಹಿಸಿದ್ದಳು ಎಂದು ತಿಳಿದು ಬಂದಿದೆ.
ದೆಹಲಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಟೂಲ್ಕಿಟ್ ಪ್ರಕರಣದಲ್ಲಿ ದಿಶಾ ಪ್ರಮುಖ ಪಾತ್ರ ವಹಿಸಿದ್ದಾಳೆ. ಆರಂಭಿಕ ವಿಚಾರಣೆಯ ಸಮಯದಲ್ಲಿ ದಿಶಾ ಸ್ವತಃ ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ಪೊಲೀಸರ ವಿಶೇಷ ಸೆಲ್, ದಿಶಾಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದೆ. ದಿಶಾ ಬಂಧನದ ನಂತರ ಟೂಲ್ಕಿಟ್ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.
ಸ್ವೀಡನ್ ದೇಶದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಈ ಟೂಲ್ಕಿಟ್ ಅನ್ನು ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು. ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಕೂಡ ಗ್ರೆಟಾ ಬೆಂಬಲ ವ್ಯಕ್ತಪಡಿಸಿದ್ದರು.
ಯಾವ ಗೂಗಲ್ ಅಕೌಂಟ್ ಮೂಲಕ ಈ ಟೂಲ್ಕಿಟ್ ಅನ್ನು ಸಾಮಾಜಿಕ ಮಾಧ್ಯಮಗಳಿಗೆ ಅಪ್ಲೋಡ್ ಮಾಡಲಾಗಿತ್ತು ಹಾಗೂ ಈ ಅಕೌಂಟಿನ ಆ್ಯಕ್ಟಿವಿಟಿಗಳ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಪೊಲೀಸರು ಗೂಗಲ್ ಸಂಸ್ಥೆಗೆ ಸೂಚಿಸಿದ್ದರು. ಎರಡು ಇಮೇಲ್ ಐಡಿ, ಒಂದು ಇನ್ಸ್ಟಾಗ್ರಾಮ್ ಖಾತೆ ಹಾಗೂ ಒಂದು ಯುಆರ್ಎಲ್ಗಳನ್ನು ಟ್ರ್ಯಾಕ್ ಮಾಡಿದ್ದ ಪೊಲೀಸರು ಈ ಬಗ್ಗೆ ಮಾಹಿತಿ ನೀಡುವಂತೆ ಗೂಗಲ್ಗೆ ತಿಳಿಸಿದ್ದರು. ಅಲ್ಲದೆ ಟೂಲ್ಕಿಟ್ ತಯಾರಿಸಿದ ಆರೋಪದಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಈಗ ಟೂಲ್ಕಿಟ್ ಪ್ರಚಾರ ಮಾಡಿರುವ ಬಗ್ಗೆ ಅಂತರ್ಜಾಲದ ಐಡಿಗಳ ಮಾಹಿತಿ ಪಡೆದ ಪೊಲೀಸರು ಬೆಂಗಳೂರಿನ ದಿಶಾ ರವಿ ಎಂಬಾಕೆಯನ್ನು ಬಂಧಿಸಿದ್ದಾರೆ.