ಹೈದರಾಬಾದ್ (ತೆಲಂಗಾಣ): ಭಾರತ ಮಾತ್ರವಲ್ಲದೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಬಗ್ಗು ಬಡಿಯುವ ದಾರಿ ಎಂದರೆ ಅದು ಲಸಿಕೆ. ಪ್ರಸ್ತುತ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ನಡೆಯುತ್ತಿದೆ. ಈ ವ್ಯಾಕ್ಸಿನೇಷನ್‌ನಲ್ಲಿ ತೆಲಂಗಾಣವು ದಾಪುಗಾಲಿಡುತ್ತದೆ. ಆದರೆ ಇಲ್ಲಿರುವ ಬುಡಕಟ್ಟು ಜನರಿಗೆ ಲಸಿಕೆ ತಲುಪುತ್ತಿಲ್ಲ. ಇದಕ್ಕೆ ತೆಲಂಗಾಣ ರಾಜ್ಯಪಾಲೆ ತಮಿಳುಸಾಯಿ ಸೌಂದರ್ ರಾಜನ್ ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ವ್ಯಾಕ್ಸಿನೇಷನ್‌ನಲ್ಲಿ ತೆಲಂಗಾಣ ಮುನ್ನಡೆಯುತ್ತಿದೆ. ಈ ರಾಜ್ಯ ಹೆಚ್ಚು ಬುಡಕಟ್ಟು ಜನಾಂಗದವರನ್ನು ಹೊಂದಿದೆ. ಅವರು ಲಸಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ, ನಾಳೆ ರಂಗಾರೆಡ್ಡಿ ಜಿಲ್ಲೆಯ ಬುಡಕಟ್ಟು ಜನಾಂಗದವರು ವಾಸಿಸುವ ಹಳ್ಳಿಗೆ ಹೋಗುತ್ತೇನೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವರೆದುರೇ ಲಸಿಕೆ ಪಡೆಯುತ್ತೇನೆ. ಅದು ಅವರ ಭಯ ನಿವಾರಿಸಲು ಸಹಾಯ ಮಾಡಬಹುದು ಎಂದು ಅವರು ಹೇಳಿದರು.
ಆಗಸ್ಟ್ 15 ರ ಮೊದಲು ಇಡೀ ಪುದುಚೇರಿಗೆ ಲಸಿಕೆ:
ಪುದುಚೇರಿಯಲ್ಲಿ 5 ಲಕ್ಷ ವ್ಯಾಕ್ಸಿನೇಷನ್ ಡೋಸ್ ನೀಡಲಾಗಿದೆ. ಆಗಸ್ಟ್ 15ರ ಮೊದಲು ಇಡೀ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಜನರಿಗೆ ಲಸಿಕೆ ನೀಡುವುದು ನಮ್ಮ ಉದ್ದೇಶ. ಜನರಿಗೆ ಲಸಿಕೆ ಬಗ್ಗೆ ಹಿಂಜರಿಕೆ ಇತ್ತು. ಆದರೀಗ ಅವರು ಅದನ್ನು ಜಯಿಸಿದ್ದಾರೆ. ನಮ್ಮ ಯೋಜನೆಯ ಪ್ರಕಾರ ಪುದುಚೇರಿಗೆ ಆಗಸ್ಟ್ 15 ರ ಮೊದಲು ಸಂಪೂರ್ಣವಾಗಿ ಲಸಿಕೆ ನೀಡಲಾಗುವುದು ಎಂದು ತಮಿಳುಸಾಯಿ ಸೌಂದರ್ ರಾಜನ್ ತಿಳಿಸಿದರು.
ತಮಿಳುಸಾಯಿ ಸೌಂದರ್ ರಾಜನ್ ತೆಲಂಗಾಣದ ಜೊತೆ ಪುದುಚೇರಿಯ ಹೆಚ್ಚುವರಿ ಗವರ್ನರ್ ಹುದ್ದೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.