ಅನಕಪಲ್ಲಿ(ಆಂಧ್ರಪ್ರದೇಶ): ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ. ನಿತ್ಯ ವಿಚಿತ್ರ ಘಟನೆಗಳು ನಡೆಯುತ್ತಿವೆ. ಕೆಲ ರೈತರು ಟೊಮೆಟೊ ಮಾರಾಟ ಮಾಡಿ ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಿದ್ದಾರೆ. ಇನ್ನು ಕೆಲ ಘಟನೆಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಟೊಮೆಟೊವನ್ನು ಕಳ್ಳರು ದೋಚುತ್ತಿದ್ದಾರೆ. ಇದರಿಂದಾಗಿ ಕೆಲವೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಇತರ ಕೆಲವರು ಪೊಲೀಸ್ ಭದ್ರತೆ ಪಡೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟೊಮೆಟೊ ಬಗ್ಗೆ ಮೀಮ್‌ಗಳು ಮತ್ತು ಜೋಕ್‌ಗಳಿಗೆ ಮಿತಿಯಿಲ್ಲ. ಯಾರಾದರೂ ಟೊಮೆಟೊಗಳನ್ನು ಖರೀದಿಸಿದರೆ, ನೀವು ತುಂಬಾ ಶ್ರೀಮಂತರು ಎಂದು ಹೇಳಿ ತಮಾಷೆ ಮಾಡುತ್ತಿರುವ ಘಟನೆಗಳೂ ವರದಿಯಾಗುತ್ತಿವೆ.
ಇದನ್ನೂ ಓದಿ: ಭಾರಿ ಮಳೆ.. ಹಿಮಾಚಲದಲ್ಲಿ ಟೊಮೆಟೋ ಬೆಳೆ ನಾಶ.. 120 ರಿಂದ 150ಕ್ಕೆ ಏರಿದ ಬೆಲೆ
ಮತ್ತೊಂದು ವಿಶೇಷ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಅಕ್ಕಿ, ಬೆಲ್ಲ, ಸಕ್ಕರೆ, ನಾಣ್ಯ, ತೆಂಗಿನ ಕಾಯಿ ಹೀಗೆ ನಾನಾ ವಸ್ತುಗಳಿಂದ ತುಲಾಭಾರ ಸೇವೆ ಮಾಡಲಾಗುತ್ತದೆ. ಕೆಲವರು ಬಂಗಾರ ಹಾಗೂ ಬೆಳ್ಳಿಯಿಂದ ತುಲಾಭಾರ ಸೇವೆ ಮಾಡುತ್ತಾರೆ. ಆದರೆ ಇಲ್ಲಿ ಟೊಮೆಟೊಗಳಲ್ಲಿ ತುಲಾಭಾರ ಸೇವೆ ನಡೆದಿದೆ. ಟೊಮೆಟೊ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಈ ಟೊಮೆಟೊ ತುಲಾಭಾರ ಜನರ ಗಮನ ಸೆಳೆದಿದೆ.
ಇದನ್ನೂ ಓದಿ: ಟೊಮೆಟೊ ದುಬಾರಿ: ಕಳ್ಳರಿಂದ ತರಕಾರಿ ರಕ್ಷಿಸಲು ಪಾಳಿಯಲ್ಲಿ ಕಾವಲು ಕಾಯುತ್ತಿರುವ ರೈತರು!
51 ಕೆ.ಜಿ ತೂಕದ ಟೊಮೆಟೊ ತುಲಾಭಾರ: ಅನಕಾಪಲ್ಲಿ ಜಿಲ್ಲೆಯ ನೂಕಾಲಮ್ಮ ದೇವಸ್ಥಾನದಲ್ಲಿ ಪಟ್ಟಣದ ಅಪ್ಪಾರಾವ್ ಮತ್ತು ಮೋಹಿನಿ ದಂಪತಿ ತಮ್ಮ ಮಗಳು ಭವಿಷ್ಯಾಳಿಗೆ ಟೊಮೆಟೊಗಳಲ್ಲಿ ತುಲಾಭಾರ ನಡೆಸಿದ್ದಾರೆ. ಈ ತುಲಾಭಾರದಲ್ಲಿ ಆಕೆಯ ತೂಕಕ್ಕೆ ಸಮನಾಗಿ 51 ಕೆ.ಜಿ ಟೊಮೆಟೊ ಇಡಲಾಗಿತ್ತು. ಅದರ ಜತೆಗೆ ಬೆಲ್ಲ ಹಾಗೂ ಸಕ್ಕರೆಯನ್ನು ಕೂಡ ಇಡಲಾಗಿತ್ತು. ತುಲಾಭಾರಕ್ಕೆ ಬಳಸಿದ ಟೊಮೆಟೊವನ್ನು ನೂಕಲಮ್ಮ ದೇವಸ್ಥಾನದಲ್ಲಿ ಪ್ರತಿನಿತ್ಯ ನೀಡುವ ಅನ್ನದಾನಕ್ಕೆ ಬಳಸಲಾಗುವುದು ಎಂದು ದೇವಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ 120 ರೂಪಾಯಿಗೂ ಅಧಿಕವಾಗಿದ್ದರಿಂದ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಬೆಲೆ ಬಾಳುವ ಟೊಮೆಟೊವನ್ನು ಬೆರಗಾಗಿ ನೋಡುತ್ತಿದ್ದರು.
₹3 ಲಕ್ಷ ಆದಾಯ ಗಳಿಸಿದ ರೈತ: ಧಾರವಾಡದಲ್ಲಿ ರೈತರೊಬ್ಬರು ಒಂದು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಸಂಪಾದಿಸಿದ್ದರು. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟರೂ ಹಲವೆಡೆ ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ರೈತ ಈರಪ್ಪ ಸಿದ್ದಪ್ಪ ಚಿಕ್ಕಣ್ಣವರ್ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದರು.
ಇದನ್ನೂ ಓದಿ: ಧಾರವಾಡ: 1 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ₹3 ಲಕ್ಷ ಆದಾಯ ಗಳಿಸಿದ ರೈತ
ಟೊಮೆಟೊ ತುಂಬಿದ್ದ ವಾಹನ ಹೈಜಾಕ್: ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೆಟೊ ತುಂಬಿದ್ದ ಬೊಲೆರೊ ವಾಹನವನ್ನು ಹೈಜಾಕ್ ಮಾಡಿದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಂಬಂಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Bengaluru crime: ಟೊಮೆಟೊ ತುಂಬಿದ್ದ ಬೊಲೆರೊ ವಾಹನ ಹೈಜಾಕ್ ಮಾಡಿದ ಖದೀಮರು..!