ಚಂಡೀಗಢ (ಪಂಜಾಬ್): ದೇಶಾದ್ಯಂತ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಮತ್ತಷ್ಟು ಏರಿಕೆಯಾಗುತ್ತಿದೆ. ಹಲವು ನಗರದಲ್ಲಿ ಈಗಾಗಲೇ 100, 150, 200 ರೂಪಾಯಿಗೆ ಪ್ರತಿ ಕೆಜಿ ಟೊಮೆಟೊ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ 300 ರೂಪಾಯಿ ಗಡಿ ತಲುಪುವ ಸಾಧ್ಯತೆಯೂ ಇದೆಯಂತೆ. ಹೆಚ್ಚುತ್ತಿರುವ ಟೊಮೆಟೊ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ರಾಜಭವನದ ಊಟ ಮೆನುವಿನಿಂದ 'ಕಿಚನ್ ಕ್ವೀನ್'ಗೆ ಕೊಕ್ ನೀಡಿದ್ದಾರೆ.
ರಾಜಭವನದ ಪ್ರಕಟಣೆ ಹೀಗಿದೆ...: ರಾಜಭವನದ ಮೆನುವಿನಿಂದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಟೊಮೆಟೊ ತೆಗೆಸಿರುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಹೆಚ್ಚುತ್ತಿರುವ ಬೆಲೆ ನಡುವೆ ಬಳಕೆಯನ್ನು ಕಡಿಮೆ ಮೂಲಕ ಉಪಯುಕ್ತವಾದ ಸಲಹೆ, ಸಂದೇಶವನ್ನು ರಾಜ್ಯಪಾಲರು ಜನತೆಗೆ ರವಾನಿಸಿದ್ದಾರೆ. 'ಟೊಮೆಟೊ ಬಳಕೆಯಲ್ಲಿ ಇಳಿಕೆ ಮಾಡಿದರೆ ಗಗನಕ್ಕೇರುತ್ತಿರುವ ಬೆಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಜ್ಯದ ನಾಗರಿಕರಿಗೆ ಒಗ್ಗಟ್ಟಿನ ಸೂಚಕವಾಗಿ ಟೊಮೆಟೊ ಸೇವನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
'ತಮ್ಮ ಸ್ವಂತ ಮನೆಯಲ್ಲಿ ಟೊಮೆಟೊ ಸೇವನೆಯನ್ನು ದೂರ ಮಾಡುವ ಮೂಲಕ ಈ ಸವಾಲಿನ ಸಮಯದಲ್ಲಿ ಪರಾನುಭೂತಿ ಮತ್ತು ಮಿತವ್ಯಯ ಹಾಗೂ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಲು' ರಾಜಪಾಲ ಪುರೋಹಿತ್ ಉದ್ದೇಶಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.
ಟೊಮೆಟೊ ಬಳಕೆಯಲ್ಲಿನ ಕಡಿತವು ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಏರುತ್ತಿರುವ ಬೆಲೆಗಳನ್ನು ಸ್ವಯಂಚಾಲಿತವಾಗಿ ತಡೆಯುತ್ತದೆ' ಎಂದೂ ರಾಜ್ಯಪಾಲ ಪುರೋಹಿತ್ ತಿಳಿಸಿದ್ದಾರೆ. "ಸಾಂಕೇತಿಕ ಸೂಚಕವಾಗಿರುವ ರಾಜ್ಯಪಾಲರ ಈ ನಿರ್ಧಾರವು ನಾಗರಿಕರು ಸಂಪನ್ಮೂಲಗಳನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ಮತ್ತು ಸವಾಲಿನ ಸಮಯದಲ್ಲಿ ಜನತೆ ಕೈಜೋಡಿಸುವ ಉದ್ದೇಶವಾಗಿದೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಕಳೆದ ಕೆಲ ವಾರಗಳಿಂದ ರಾಜ್ಯವು ಟೊಮೆಟೊ ಬೆಲೆಯಲ್ಲಿ ಏರಿಕೆಯೊಂದಿಗೆ ಹೋರಾಟ ನಡೆಸುತ್ತಿದೆ. ಇದು ಮನೆಯ ಮುಖ್ಯ ಆಹಾರವಾಗಿದೆ. ಬೆಲೆ ಏರಿಕೆಯನ್ನು ತಡೆಯಲು ಬೇಡಿಕೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಪ್ರತಿಪಾದಿಸಲು ರಾಜ್ಯಪಾಲ ಪುರೋಹಿತ್ ಅವರು ಜನರು ಪರ್ಯಾಯ ತರಕಾರಿಗಳನ್ನು ಬಳಸಬೇಕೆಂದು ಮತ್ತು ಸದ್ಯಕ್ಕೆ ತಮ್ಮ ಮೆನುವಿನಲ್ಲಿ ಟೊಮೆಟೊಗಳನ್ನು ಸೇರಿಸುವುದನ್ನು ತಡೆಯಲು ವಿನಂತಿಸಿದ್ದಾರೆ" ಎಂದು ಅಧಿಕಾರಿ ವಿವರಿಸಿದ್ದಾರೆ.
200ಕ್ಕೂ ಅಧಿಕ ದರದಲ್ಲಿ ಟೊಮೆಟೊ ಮಾರಾಟ: ಪಂಜಾಬ್ನಲ್ಲಿ ಟೊಮೆಟೊ ಬೆಲೆ ನಿತ್ಯವೂ ಏರಿಕೆಯಾಗುತ್ತಿದೆ. ಮೊಹಾಲಿಯಲ್ಲಿ ಕೆಜಿ ಟೊಮೆಟೊ 220 ರೂ.ಗೆ ಲಭ್ಯವಿದ್ದರೆ, ಇತರ ನಗರಗಳಲ್ಲಿ ಇದರ ಬೆಲೆ 200 ರೂ.ಗಿಂತ ಅಧಿಕವಾಗಿದೆ. ಮುಂಬರುವ ದಿನಗಳಲ್ಲಿ ಟೊಮೆಟೊ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು 300 ರೂ.ವರೆಗೂ ತಲುಪಬಹುದು ಎಂದು ತರಕಾರಿ ಸಗಟು ವ್ಯಾಪಾರಿಗಳು ಹೇಳುತ್ತಿದ್ದಾರೆ.