ನವದೆಹಲಿ/ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟ ಎಂದರೆ ಅಂತಾರಾಷ್ಟ್ರೀಯ ಕ್ರೀಡಾಕೂಟ. ಈ ಬಾರಿಯ ಕ್ರೀಡಾಕೂಟ ಜುಲೈ 23 ರಂದು ಟೋಕಿಯೊನಲ್ಲಿ ಪ್ರಾರಂಭವಾಗಿದ್ದು, ಆಗಸ್ಟ್ 8ರವರೆಗೆ ನಡೆಯಲಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಒಟ್ಟು 228 ಮಂದಿ ಪಾಲ್ಗೊಂಡಿದ್ದು, ಈ ಪೈಕಿ 120 ಮಂದಿ ಕ್ರೀಡಾಪಟುಗಳಾಗಿದ್ದಾರೆ.
ಕೋವಿಡ್ ಮಾರ್ಗಸೂಚಿ ಕಡ್ಡಾಯ: ಇನ್ನು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಗೆದ್ದವರಿಗೆ ಪದಕ ವಿತರಣೆ ವೇಳೆ ಸ್ಪರ್ಧಿಗಳು, ಮೆಡಲ್ ನೀಡುವವರು, ಸ್ವಯಂಸೇವಕರು ಮತ್ತು ಇತರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾರ್ಗಸೂಚಿ ಈಗಾಗಲೇ ಬಿಡುಗಡೆ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಯಾರೂ ಕೂಡಾ ಪದಕ ವಿತರಣೆ ವೇಳೆ ಗುಂಪು ಗುಂಪಾಗಿ ಫೋಟೋ ತೆಗೆಸಿಕೊಳ್ಳಬಾರದು, ಸ್ಟೇಡಿಯಂನ ಬಳಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದೆ.
ಗಣ್ಯರ ಶುಭಹಾರೈಕೆ:
ಇನ್ನು ದೇಶದ ಪ್ರಧಾನಿ ಮೋದಿಯವರು ಸಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದು, ಟೋಕಿಯೋಗೆ ತೆರಳುವ ಮುನ್ನ ಶುಭಹಾರೈಸಿದ್ದರು. ಅನೇಕ ರಾಜ್ಯಗಳು ಸಹ ಕ್ರೀಡಾಪಟುಗಳು ಜಯಗಳಿಸಿದರೆ ಅಂತಹವರಿಗೆ ಬಹುಮಾನವನ್ನು ಸಹ ಘೋಷಣೆ ಮಾಡಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ನಮ್ಮ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು ನಾವು ಬಯಸುತ್ತೇವೆ. ದೇಶದ ಪ್ರತಿಯೊಬ್ಬ ವ್ಯಕ್ತಿಯು ಅವರೊಂದಿಗೆ ಇದ್ದಾನೆ ಎಂದು ಸಂಸತ್ ಬಳಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಭಾರತ ಮತ್ತು ಒಲಿಂಪಿಕ್ಸ್: ಒಲಿಂಪಿಕ್ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಿಗಳು ಪ್ರಥಮ ಬಾರಿಗೆ ಭಾಗವಹಿಸಿದ್ದು 1920ರಲ್ಲಿ. ಆಗ ಸರ್ ದೊರಾಬ್ ತಾತಾ ಎಂಬವರು ತಮ್ಮ ಸ್ವಂತ ಖರ್ಚಿನಲ್ಲಿ ಮೂವರ ತಂಡವನ್ನು ಕಳಿಸಿದರು. ಇದೀಗ ದೇಶ ಅನೇಕ ಕ್ರೀಡಾಪಟುಗಳು ಭಾರತದ ಕೀರ್ತಿ ಪತಾಕೆ ಹಾರಿಸಲು ಮುಂದಾಗಿದ್ದಾರೆ.