ಹೈದರಾಬಾದ್: ಟೋಕಿಯೋ ಒಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಹೆಮ್ಮೆ ಪಡುವಂತೆ ಮಾಡಿದ ಮೀರಾಬಾಯಿ ಚಾನು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಇಂದು ಈ ಧೀರೆಯ ಹುಟ್ಟುಹಬ್ಬದ ದಿನ. 27ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಾಧಕಿಗೆ ಜನ್ಮದಿನದ ಶುಭಾಶಯಗಳು.
ಚಾನು 1994ರ ಆಗಸ್ಟ್ 8ರಂದು ಮಣಿಪುರದ ನಾಂಗ್ಪಾಂಕ್ ಕಕ್ಚಿಂಗ್ ಇಂಫಾಲದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಇವರು ಒಲಿಂಪಿಕ್ಸ್ನಲ್ಲಿ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು.
48 ಕೆ.ಜಿ ವಿಭಾಗದಲ್ಲಿ 2014ರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಿಯಮಿತವಾಗಿ ಭಾಗವಹಿಸಿದ ಚಾನು, ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ ಅನೇಕ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರ ಕ್ರೀಡಾ ಸಾಧನೆ ಗುರುತಿಸಿದ ಭಾರತ ಸರ್ಕಾರ 2018ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ (ಈಗಿನ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ) ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, ಅದೇ ವರ್ಷ ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ನೀಡಲಾಗಿದೆ.
ಪದಕ ಬೇಟೆ: ಗ್ಲ್ಯಾಸ್ಗೋನಲ್ಲಿ ನಡೆದ 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 48 ಕೆಜಿ ತೂಕದ ವಿಭಾಗದಲ್ಲಿ ಚನು ಬೆಳ್ಳಿ ಪದಕ ಗೆದ್ದಿದ್ದಾರೆ. ಇದಾದ ಬಳಿಕ ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕ್ರೀಡಾಕೂಡದಲ್ಲೂ ಸಹ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇನ್ನು ಯುಎಸ್ನ ಅನಾಹೈಮ್ನಲ್ಲಿ ನಡೆದ 2017ರ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಬೇಟೆಯಾಡಿದ್ದಾರೆ.
ಟೋಕಿಯೊದಲ್ಲಿ ಬೆಳ್ಳಿ ಗೆದ್ದ ಧೀರೆ: ಟೋಕಿಯೊ ಒಲಿಂಪಿಕ್ಸ್ 2020ರಲ್ಲಿ ಸುಮಾರು 202 ಕೆ.ಜಿ ತೂಕ ಎತ್ತುವ ಮೂಲಕ 49 ಕೆಜಿ ವೈಟ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದರು. ಈ ಮೂಲಕ ಬೆಳ್ಳಿ ಪದಕ ಗೆದ್ದ ಮೊದ ಭಾರತೀಯ ವೇಟ್ ಲಿಫ್ಟರ್ ಎಂಬ ಖ್ಯಾತಿ ಗಳಿಸಿದರು. ಕರ್ಣಂ ಮಲ್ಲೇಶ್ವರಿ (2000 ಸಿಡ್ನಿ ಒಲಂಪಿಕ್ಸ್ ಕಂಚಿನ ಪದಕ) ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ವೇಟ್‌ಲಿಫ್ಟರ್ ಎನಿಸಿಕೊಂಡರು. 115 ಕಿ.ಗ್ರಾಂ ಕ್ಲೀನ್ ಮತ್ತು ಜರ್ಕ್‌ನಲ್ಲಿ ಯಶಸ್ವಿಯಾಗಿ ಎತ್ತುವ ಮೂಲಕ ಚಾನು ಹೊಸ ಒಲಂಪಿಕ್ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳ್ಳಿ ಪದಕ ಗೆದ್ದ ಭಾರತದ ಹೆಮ್ಮೆಯ ಕುವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದರು.