ನವದೆಹಲಿ: ಸಾವನ್ನಪ್ಪಿದ ಮಗಳ ಶವದ ಮರಣೋತ್ತರ ಪರೀಕ್ಷೆಯನ್ನು ತಾವು ಸೂಚಿಸಿದ ವೈದ್ಯರಿಂದಲೇ ಮಾಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾ ಮಾಡಿದೆ. ತಮಿಳುನಾಡಿನ ಖಾಸಗಿ ವಸತಿ ಶಾಲೆಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ 17 ವರ್ಷದ ಬಾಲಕಿಯ ತಂದೆ ಸುಪ್ರೀಂಕೋರ್ಟ್ಗೆ ಈ ಅರ್ಜಿ ಸಲ್ಲಿಸಿದ್ದರು.
ಮತ್ತೊಮ್ಮೆ ಮೃತ ಬಾಲಕಿಯ ಶವದ ಮರಣೋತ್ತರ ಪರೀಕ್ಷೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದು ಇಲ್ಲಿ ಗಮನಾರ್ಹ. ಜುಲೈ 13 ರಂದು ವಸತಿ ಶಾಲೆಯ ಆವರಣದಲ್ಲಿ 12 ನೇ ತರಗತಿಯ ಬಾಲಕಿ ಸಾವನ್ನಪ್ಪಿದ ಘಟನೆ ನಡೆದ ನಂತರ, ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು.
ಹಿಂಸಾತ್ಮಕ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್ ಹೈಕೋರ್ಟ್, ಗಲಭೆಕೋರರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿತ್ತು.
ಬಾಲಕಿಯ ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆಗೂ ಹೈಕೋರ್ಟ್ ಆದೇಶಿಸಿತ್ತು. ಆದರೆ, ಮರು ಮರಣೋತ್ತರ ಪರೀಕ್ಷೆಯನ್ನು ತನ್ನ ಆಯ್ಕೆಯ ವೈದ್ಯರಿಂದಲೇ ಮಾಡಿಸುವಂತೆ ಸಂತ್ರಸ್ತೆಯ ತಂದೆ ಮಾಡಿದ ಮನವಿಯನ್ನು ಇಂದು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ತನ್ನ ಆಯ್ಕೆಯ ವೈದ್ಯರನ್ನು ತಜ್ಞರ ತಂಡಕ್ಕೆ ಸೇರಿಸಲು ಮತ್ತು ಹೈಕೋರ್ಟ್ ನಿರ್ದೇಶನದ ವಿರುದ್ಧದ ಮನವಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠಕ್ಕೆ ಬಾಲಕಿಯ ತಂದೆ ಮನವಿ ಮಾಡಿದ್ದರು.
ನಿಮಗೆ ಹೈಕೋರ್ಟ್ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್ ಬಾಲಕಿಯ ತಂದೆಯ ಅರ್ಜಿಯನ್ನು ವಜಾ ಮಾಡಿತು. ಆದಾಗ್ಯೂ, ಹೈಕೋರ್ಟ್ ಆದೇಶದ ವಿರುದ್ಧ ಅವರ ಮನವಿಯನ್ನು ಜುಲೈ 21 ರಂದು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಇದನ್ನು ಓದಿ:ಅಕ್ರಮ ಗಣಿಗಾರಿಕೆ ತಡೆಯಲು ಹೋದ ಡಿಎಸ್ಪಿ ಮೇಲೆ ಟ್ರಕ್ ಹರಿಸಿ ಕೊಲೆ.. ಹರಿಯಾಣದಲ್ಲಿ ಭೀಕರ ಘಟನೆ