ಕೊಯಂಬತ್ತೂರು : ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ಪರಿಸರ ಸಮಸ್ಯೆಗಳ ಅಡಿಯಲ್ಲಿ ಜಗತ್ತು ತತ್ತರಿಸುತ್ತಿರುವಾಗ ಕೊಯಂಬತ್ತೂರಿನ ಹಳ್ಳಿಯೊಂದು ಇತರರಿಗೆ ಮಾದರಿಯಾಗುವಂತಹ ಉದಾಹರಣೆಯನ್ನು ನೀಡುವ ಮೂಲಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ದಾರಿ ತೋರಿಸಿದೆ. ಹಸಿರು ಉಪಕ್ರಮದಲ್ಲಿ, ಹಳ್ಳಿಯ ಜನರು ಮಿನಿ-ಫಾರೆಸ್ಟ್ ರಚಿಸುವಲ್ಲಿ ಜಪಾನಿನ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ.
10,000 ಸಸಿಗಳನ್ನು ನೆಡುವ ಉನ್ನತ ಗುರಿಯೊಂದಿಗೆ ಪ್ರಾರಂಭಿಸಲಾದ ಅವರ ಯೋಜನೆಯು ಇದೀಗ 2,000 ಸಸಿಗಳನ್ನು ನೆಡುವವರೆಗೆ ಸುಗಮವಾಗಿ ಸಾಗಿದೆ. ಇದು ಖಾಲಿಯಾಗುತ್ತಿರುವ ಅಂತರ್ಜಲವನ್ನು ಹೆಚ್ಚಿಸುವಲ್ಲಿ ಮತ್ತು ಹಳ್ಳಿಯನ್ನು ಮತ್ತೆ ಸೊಂಪಾಗಿ ಇಡುವಲ್ಲಿ ಸಹಕಾರಿಯಾಗಿದೆ ಎಂದು ಜನರು ಹೇಳುತ್ತಾರೆ.
ಕೊಯಂಬತ್ತೂರು ಜಿಲ್ಲೆಯ ಅನ್ನೂರ್ ಪ್ರದೇಶದ ಮಸಕವುಂದನ್ ಚೆಟ್ಟಿಪಾಲಯಂನ ಪಟ್ಟಣ ಪಂಚಾಯತ್ ಬಳಿಯಿರುವ ಸೆಮ್ಮನಿ ಚೆಟ್ಟಿಪಾಲಯಂ ಎಂಬ ಹಳ್ಳಿಯಲ್ಲಿನ ಜನರು ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಮಳೆಯ ಕೊರತೆ, ನದಿಗಳ ಸವಕಳಿ, ಅಂತರ್ಜಲ ಮಟ್ಟ 100 ಅಡಿಗಿಂತಲೂ ಕಡಿಮೆಯಾಗುವುದು ಪರಿಸರದಲ್ಲಿ ಏರುಪೇರಾಗಲು ಕಾರಣ. ಈ ಬಗ್ಗೆ ಅರಿತ ಗ್ರಾಮಸ್ಥರು 10,000 ಸಸಿಗಳನ್ನು ನೆಡಲು ನಿರ್ಧರಿಸಿದ್ದಾರೆ. ಹೀಗೆ ಮಾಡಿದಲ್ಲಿ, ಮಳೆ ಬೀಳುತ್ತದೆ, ಜತೆಗೆ ತಾಪಮಾನ ಮಟ್ಟವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳುತ್ತಾರೆ.
ಮಿಯವಾಕಿ ವಿಧಾನ (ಜಪಾನಿನ ಸಸ್ಯವಿಜ್ಞಾನಿ ಅಕಿರಾ ಮಿಯಾವಾಕಿಯ ಹೆಸರನ್ನು ಇಡಲಾಗಿದೆ)ವನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮಸ್ಥರು 2,000 ಸಸಿಗಳನ್ನು ನೆಡುವ ಮೂಲಕ ಮಿನಿ-ಫಾರೆಸ್ಟ್ ರಚಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದರು. ತಮ್ಮ ಹಳ್ಳಿಯ ಉತ್ತರ ಭಾಗದಲ್ಲಿ ಒಂದು ಕೊಳದ ಸುತ್ತಲೂ ಈ ಫಾರೆಸ್ಟ್ನ್ನು ರಚಿಸಿದ್ದಾರೆ. ಈ ಭೂಮಿಯಲ್ಲಿ ಅನೇಕ ಸಸಿಗಳನ್ನು ನೆಟ್ಟಿದ್ದಾರೆ.
"ನಮ್ಮ ಗ್ರಾಮವನ್ನು ಇತರರಿಗೆ ಮಾದರಿಯನ್ನಾಗಿ ಮಾಡಲು ನಾವು ಯೋಜಿಸಿದ್ದೇವೆ. ಮೊದಲ ಹಂತದಲ್ಲಿ ನಾವು 2,000 ಸಸಿಗಳನ್ನು ನೆಡುವುದನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಹಸಿರು ಉಪಕ್ರಮವು ಮಳೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಒಂದು ನಿರ್ಧಾರ ಜನರ ಬೆಂಬಲದೊಂದಿಗೆ ತೆಗೆದುಕೊಳ್ಳಲಾಗಿದೆ. ಇದು ನಮ್ಮ ಯುವಕರಿಗೆ ಸ್ಫೂರ್ತಿಯಾಗಲಿದೆ" ಎಂದು ಗ್ರಾಮಸ್ಥರು ಹೇಳುತ್ತಾರೆ.