ಚೆನ್ನೈ: ತಮಿಳುನಾಡಿನ ನೋಂದಣಿ ಇಲಾಖೆ ಇತ್ತೀಚೆಗೆ ಅತಿಕ್ರಮಣ ಮಾಡಿರುವ ಭೂಮಿ ಮತ್ತು ಜಲ ಮೂಲಗಳು, ಜಲಮಾರ್ಗಗಳು ಮತ್ತು ಜಲ ಸಂಗ್ರಹಣಾ ಪ್ರದೇಶಗಳಲ್ಲಿನ ಆಸ್ತಿಗಳ ಮೌಲ್ಯವನ್ನು ಶೂನ್ಯಕ್ಕೆ ಇಳಿಸಿದೆ. ಸರ್ಕಾರದ ಆದೇಶದ ಅನುಸಾರ ನೋಂದಣಿ ಇಲಾಖೆಯ ಈ ನಿರ್ಧಾರವು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದವರಿಗೆ ಭಾರಿ ಹೊಡೆತ ನೀಡಿದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು ಜಿಲ್ಲೆಗಳ 50ಕ್ಕೂ ಹೆಚ್ಚು ಕೆರೆಗಳು ಕೋಟ್ಯಂತರ ರೂಪಾಯಿ ಮೌಲ್ಯದ ಭೂ ಹಿಡುವಳಿ ಮತ್ತು ವಸತಿ ಆಸ್ತಿಗಳಾಗಿ ಪರಿವರ್ತನೆ ಆಗಿರುವುದನ್ನು ಜಲಮಂಡಳಿ ಮತ್ತು ಕಂದಾಯ ಇಲಾಖೆ ವಿಸ್ತೃತ ಅಧ್ಯಯನದಲ್ಲಿ ಪತ್ತೆ ಹಚ್ಚಿವೆ. ಈ ವಿಷಯ ಗೊತ್ತಾದ ಬಳಿಕ ನೋಂದಣಿ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.
ಹೆಚ್ಚಿನ ಅತಿಕ್ರಮಣ ಭೂಮಿಗಳನ್ನು ನೀರ್ನಿಲೈ (ಜಲಸಂಸ್ಥೆಗಳು) 'ಪೊರ್ಮಾಬೊಕೆ' ಎಂದು ವರ್ಗೀಕರಿಸಲಾಗಿದೆ. ಆದರೆ, ಪಟ್ಟಾಗಳು ಅಥವಾ ನೋಂದಣಿ ಪತ್ರಗಳನ್ನು ಮುಖ್ಯವಾಗಿ 1980 ಮತ್ತು 1997 ರ ನಡುವೆ ನೀಡಲಾಗಿದೆ. ಈ ನೀರ್ನಿಲೈ ಚೆನ್ನೈ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರವಾಹಕ್ಕೆ ಕಾರಣವಾಗಿತ್ತು ಎಂದು ಅಲ್ಲಿನ ನೋಂದಣಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಆದೇಶಕ್ಕೆ ಸರ್ಕಾರ ಬದ್ಧವಾಗಿರಲಿ:
ಅತಿಕ್ರಮಣದ ಭೂಮಿ, ಜಲಮೂಲ, ಮಾರ್ಗಗಲು ಹಾಗೂ ಜಲ ಸಂಗ್ರಹಣಾ ಪ್ರದೇಶಗಳಲ್ಲಿನ ಆಸ್ತಿಗಳ ಮೌಲ್ಯವನ್ನು ಶೂನ್ಯಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಚೆಂಗಲ್ಪಟ್ಟು ಮೂಲದ ಸಾಮಾಜಿಕ ಕಾರ್ಯಕರ್ತ ಎಂ. ಸರವಣನ್ ಹೇಳಿದ್ದಾರೆ. ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಜಲಮೂಲಗಳನ್ನು ಭೂಸ್ವಾಧೀನ ಆಸ್ತಿಯನ್ನಾಗಿ ಪರಿವರ್ತಿಸುವುದರ ವಿರುದ್ಧ ಸರವಣ್ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
ನೋಂದಣಿ ಇಲಾಖೆಯ ಈ ನಿರ್ಧಾರದಿಂದ ಅನೇಕ ಜಲಮೂಲಗಳನ್ನು ಸಹಜ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ. ಈಗಾಗಲೇ ಅತಿ ಕ್ರಮಿಸಿಕೊಂಡಿರುವವರು, ಇಂತಹ ಆಸ್ತಿಗಳನ್ನು ಹೊಂದಿರುವವರು ಸುಮ್ಮನೆ ಕೂರುವುದಿಲ್ಲ. ಆದರೆ, ಸರ್ಕಾರವು ದತ್ತಾಂಶ ಮತ್ತು ದಾಖಲೆಗಳೊಂದಿಗೆ ತನ್ನ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಏಳು ವರ್ಷಗಳಲ್ಲೇ ಅತಿ ಹೆಚ್ಚು ಪ್ರವಾಸಿಗರ ಆಗಮನ