ಚೆನ್ನೈ(ತಮಿಳುನಾಡು): ತಮಿಳುನಾಡು ವಿಗ್ರಹ ಘಟಕದ ಸಿಐಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸಾವಿರ ವರ್ಷಗಳಷ್ಟು ಹಳೆಯದಾದ ಮತ್ತು ₹500 ಕೋಟಿ ಮೌಲ್ಯದ 'ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತಂಜಾವೂರಿನ ಬ್ಯಾಂಕ್ ಲಾಕರ್ನಲ್ಲಿ ಇಡಲಾಗಿದ್ದ ಈ ಶಿವಲಿಂಗ ಇದೀಗ ಪೊಲೀಸರ ವಶವಾಗಿದೆ.
ತಂಜಾವೂರಿನ ಅರುಳಾನಂದ ಬಡಾವಣೆಯ ವ್ಯಕ್ತಿಯೋರ್ವ ಪುರಾತನ ಕಾಲದ ವಿಗ್ರಹವನ್ನು ಬ್ಯಾಂಕ್ನಲ್ಲಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರ ತಂಡ ಡಿಸೆಂಬರ್ 30ರಂದು ದಾಳಿ ನಡೆಸಿತ್ತು. ಈ ವೇಳೆ ಬ್ಯಾಂಕ್ ಲಾಕರ್ನಲ್ಲಿ ಪಚ್ಚೆ ಶಿವಲಿಂಗ ಇಟ್ಟಿರುವ ಮಾಹಿತಿ ಲಭ್ಯವಾಗಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಡಿಜಿಪಿ ಕೆ. ಜಯಂತ್ ಮುರಳಿ ಮಾಹಿತಿ ನೀಡಿದ್ದಾರೆ.
ಪಚ್ಚೆ ಶಿವಲಿಂಗದ ಮೌಲ್ಯ 500 ಕೋಟಿ ರೂ. ಎಂದು ಹೇಳಲಾಗುತ್ತಿದ್ದು, ಯಾವ ದೇವಸ್ಥಾನಕ್ಕೆ ಸೇರಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ ಎಂದಿದ್ದಾರೆ. ಇದರ ಅಪಹರಣ ಮಾಡಿ ವಿದೇಶಕ್ಕೆ ರಫ್ತು ಮಾಡುವ ಯೋಜನೆ ಬಗ್ಗೆ ಇದೀಗ ತನಿಖೆ ನಡೆಸಲಾಗುತ್ತಿದೆ ಎಂದು ಜಯಂತ್ ಮುರಳಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಪಚ್ಚೆ ಲಿಂಗದ ಒಟ್ಟು ತೂಕ 530 ಗ್ರಾಂ ವಿದ್ದು, 8ಸೆಂ. ಮೀ ಎತ್ತರವಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿರಿ: ಅನ್ನದಾತ ಬೆಳೆದ ಬಾಳೆಗೆ ನಮೋ ಫಿದಾ.. ಪ್ರಧಾನಿಗೆ ವಿಶೇಷ ಬಾಳೆಹಣ್ಣು ನೀಡಲು ಅವಕಾಶ ಕೇಳಿದ ರೈತ..
2016ರಲ್ಲಿ ನಾಗಪಟ್ಟಣಂ ಜಿಲ್ಲೆಯ ಬ್ರಹ್ಮಪುರೇಶ್ವರ ದೇವಾಲಯದಲ್ಲಿನ ಪಚ್ಚೆ ಶಿವಲಿಂಗ ನಾಪತ್ತೆಯಾಗಿದ್ದು, ಇದರ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ. ತಂಜಾವೂರು ಚೋಳರ ರಾಜಧಾನಿಯಾಗಿದ್ದು, ಸುತ್ತಮುತ್ತಲಿನ ತಿರುವಾರೂರ್, ವೇದಾರಣ್ಯಂ, ತಿರುಕವಲೈ, ತಿರುಕ್ಕರವಾಸಲ್, ನಾಗಪಟ್ಟಣಂನಲ್ಲಿರುವ ಏಳು ಶಿವಾ ದೇವಾಲಯಗಳಲ್ಲಿ ಅಮೂಲ್ಯವಾದ ಪಚ್ಚೆ ಲಿಂಗಗಳು ಈಗಲೂ ಕಂಡು ಬರುತ್ತವೆ.