ಚೆನ್ನೈ: ದೇಶದಲ್ಲಿ ಹಂಚಿಕೆ ಮಾಡಲಾಗಿರುವ ಕೋವಿಡ್ ಲಸಿಕೆ ವ್ಯರ್ಥ ಮಾಡುವುದರಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಹಕ್ಕು ಕಾಯ್ದೆ(ಆರ್ಟಿಐ) ಉತ್ತರದಡಿ ಈ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 11ರವರೆಗೆ ವಿವಿಧ ರಾಜ್ಯಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡೋಸ್ ಪೋಲು ಆಗಿರುವ ಮಾಹಿತಿ ಆರ್ಟಿಐ ಅಡಿ ಮಾಹಿತಿ ಬಹಿರಂಗಗೊಂಡಿದ್ದು, ತಮಿಳುನಾಡು ಶೇ.12ರಷ್ಟು ವ್ಯಾಕ್ಸಿನ್ ವ್ಯರ್ಥ ಮಾಡಿದೆ.
ಉಳಿದಂತೆ ಹರಿಯಾಣ ಶೇ.9.74, ಪಂಜಾಬ್ ಶೇ. 8.12, ಮಣಿಪುರ ಶೇ. 7.8 ಮತ್ತು ತೆಲಂಗಾಣ ಶೇ. 7.55ರಷ್ಟು ಲಸಿಕೆ ವ್ಯರ್ಥ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆ ಅಡಿ ಉತ್ತರ ತಿಳಿದು ಬಂದಿದೆ. ಜನವರಿ ತಿಂಗಳಿಂದ ಏಪ್ರಿಲ್ 11ರವರೆಗೆ ಎಲ್ಲ ರಾಜ್ಯಗಳು 10 ಕೋಟಿ ಕೋವಿಡ್ ವ್ಯಾಕ್ಸಿನ್ ಲಸಿಕೆ ಬಳಕೆ ಮಾಡಿದ್ದು, ಇದರಲ್ಲಿ 44 ಲಕ್ಷ ಡೋಸ್ ಲಸಿಕೆ ವ್ಯರ್ಥವಾಗಿದೆ.
ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ವ್ಯರ್ಥವಾಗುತ್ತಿದ್ದ ಕಾರಣ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ಮಾಡಿ ಮನವಿ ಮಾಡಿಕೊಂಡಿತ್ತು. ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ, ಪಂಜಾಬ್, ದೆಹಲಿ ಸೇರಿದಂತೆ ಅನೇಕ ರಾಜ್ಯಗಳು ತಮಗೆ ಕೋವಿಡ್ ವ್ಯಾಕ್ಸಿನ್ ಲಸಿಕೆ ಅಭಾವ ಉಂಟಾಗಿದೆ ಎಂಬ ಮಾಹಿತಿ ಶೇರ್ ಮಾಡಿಕೊಂಡಿದ್ದವು.
ಇನ್ನು ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಗೋವಾ, ದಮನ್ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷ ದ್ವೀಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವ್ಯರ್ಥವಾಗಿಲ್ಲ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಮಿಳುನಾಡು ಆರೋಗ್ಯ ಸಚಿವ ಸಿ. ವಿಜಯ್ ಬಾಸ್ಕರ್, ರಾಜ್ಯದಲ್ಲಿ ಲಸಿಕೆ ವ್ಯರ್ಥವಾಗುವ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದಿದ್ದಾರೆ. ರಾಜ್ಯದಲ್ಲಿ ಸದ್ಯ 6 ಲಕ್ಷ ಕೋವಿಡ್ ಡೋಸ್ ಲಭ್ಯವಿದ್ದು, ಏಪ್ರಿಲ್ 18ರಂದು ಮತ್ತೊಂದು ಲಕ್ಷ ಲಸಿಕೆ ಆಗಮಿಸಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ಮಾತನಾಡಿ, ಕೋವಿಡ್ ಲಸಿಕೆ ವ್ಯರ್ಥವಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನ ಮಾತ್ರ ದ್ವೇಷಿಸಬೇಕು. ಮೊದಲಿಗೆ ಕೇಂದ್ರ ಸರ್ಕಾರ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವಂತೆ ಹೇಳಿದ್ದರಿಂದ ವ್ಯಾಕ್ಸಿನೇಷನ್ ಡ್ರೈವ್ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದರು. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೋಲು ಆಗಿದೆ ಎಂದಿದ್ದಾರೆ.
ಪ್ರಧಾನ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಮಾತನಾಡಿ, ಕೋವಿಡ್ ಡೋಸ್ ವ್ಯರ್ಥವಾಗುವ ವಿಷಯವನ್ನ ದೊಡ್ಡ ಪ್ರಮಾದ ಎಂದು ಬಿಂಬಿಸುವ ಅಗತ್ಯವಿಲ್ಲ. 10 ಜನರಿಗೆ ನೀಡುವ ಕೋವಿಡ್ ವ್ಯಾಕ್ಸಿನ್ನ ಒಂದು ಬಾಕ್ಸ್ ಓಪನ್ ಮಾಡಿದ ಮೇಲೆ 10 ಜನರಿಗೆ ನೀಡಬೇಕು. ಆದರೆ ಅದನ್ನ 6 ಜನರಿಗೆ ಮಾತ್ರ ನೀಡಿದಾಗ ಉಳಿದ 4 ಡೋಸ್ ವ್ಯರ್ಥವಾಗುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಬಗ್ಗೆ ಜನರಿಗೆ ಅರಿವು ಮೂಡುತ್ತಿದ್ದು, ವ್ಯರ್ಥವಾಗುವುದಿಲ್ಲ ಎಂದರು.