ಚೆನ್ನೈ (ತಮಿಳುನಾಡು): ತಮಿಳುನಾಡು ಬಿಜೆಪಿಯ ಇಬ್ಬರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕ್ರಮ ಜರುಗಿಸಿದ್ದಾರೆ. ಮಹಿಳಾ ನಾಯಕಿ ವಿರುದ್ಧ ನಿಂದನೀಯ ಭಾಷೆ ಬಳಸಿದ ಹಿನ್ನೆಲೆಯಲ್ಲಿ ಪಕ್ಷದ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತಿರುಚ್ಚಿ ಸೂರ್ಯ ಶಿವ ಅವರಿಗೆ ಪಕ್ಷದ ಚಟುವಟಿಕೆಗಳಿಂದ ನಿರ್ಬಂಧ ಹೇರಲಾಗಿದೆ. ಜೊತೆಗೆ ಪಕ್ಷ ವಿರೋಧಿ ಚಟುವಟಿಕೆ ಕಾರಣ ನಟಿ ಗಾಯತ್ರಿ ರಘುರಾಮ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ತಮಿಳುನಾಡು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥೆ ಡೈಸಿ ಸರಣ್ ಅವರೊಂದಿಗೆ ತಿರುಚ್ಚಿ ಸೂರ್ಯ ನಡೆಸಿದ ದೂರವಾಣಿ ಸಂಭಾಷಣೆ ವೈರಲ್ ಆಗಿತ್ತು. ಇದರಲ್ಲಿ ಡೈಸಿ ಸರಣ್ ವಿರುದ್ಧ ನಿಂದನೀಯ ಭಾಷೆಯನ್ನು ತಿರುಚ್ಚಿ ಸೂರ್ಯ ಬಳಸಿದ್ದರು. ಇದು ನನ್ನ ಗಮನಕ್ಕೆ ಬಂದಿತ್ತು. ಈ ಕುರಿತು ಒಂದು ವಾರದೊಳಗೆ ಪಕ್ಷದ ಹೈಕಮಾಂಡ್‌ಗೆ ವರದಿ ಸಲ್ಲಿಸುವಂತೆ ಶಿಸ್ತು ಸಮಿತಿಗೆ ತಿಳಿಸಲಾಗಿದ್ದು, ಅಲ್ಲಿಯವರೆಗೆ ಪಕ್ಷದ ಕಾರ್ಯಕ್ರಮಗಳಿಗೆ ಹಾಜರಾಗದಂತೆ ಸೂರ್ಯಗೆ ಸೂಚಿಸಲಾಗಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಡಿಎಂಕೆಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ತಿರುಚ್ಚಿ ಶಿವ ಪುತ್ರರಾದ ಸೂರ್ಯ ಇದೇ ವರ್ಷದ ಮೇ ತಿಂಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದೇ ವೇಳೆ, ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ನಟಿ ಗಾಯತ್ರಿ ರಘುರಾಮ್ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ನಟಿ ಗಾಯತ್ರಿ ಇತರ ರಾಜ್ಯ ಮತ್ತು ಸಾಗರೋತ್ತರ ತಮಿಳು ಅಭಿವೃದ್ಧಿ ಮತ್ತು ಕಲೆ ಮತ್ತು ಸಂಸ್ಕೃತಿ ರಾಜ್ಯ ವಿಭಾಗದ ರಾಜ್ಯಾಧ್ಯಕ್ಷರಾಗಿದ್ದರು.
ಇದನ್ನೂ ಓದಿ: ಟಾರ್ಗೆಟ್ 150... ಗುಜರಾತ್ನಲ್ಲಿ ಕೇವಲ ಗೆಲುವು ಸಾಲದು.. ದೊಡ್ಡ ದಾಖಲೆಯ ಜಯ ಬಯಸಿರುವ ಮೋದಿ