ಚನ್ನೈ : ಕಾವೇರಿ ವಿಚಾರದಲ್ಲಿ ಪದೇಪದೆ ಕ್ಯಾತೆ ತೆಗೆಯುವ ತಮಿಳುನಾಡು ಇದೀಗ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಈ ಸಂಬಂಧ ಅಲ್ಲಿನ ಸಚಿವ ದುರೈ ಮುರುಗನ್ ಮೇಕೆದಾಟು ಯೋಜನೆಗೆ ಹಣ ಮಂಜೂರು ಮಾಡುವ ಕರ್ನಾಟಕದ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ.
ಅಲ್ಲದೆ, ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅನುಮತಿಯಿಲ್ಲದೆ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಜಲಾಶಯವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಹಣ ಮಂಜೂರು ಮಾಡಿದೆ ಎಂದು ದುರೈ ಮುರುಗನ್ ಆರೋಪಿಸಿದ್ದಾರೆ.
ಮೇಕೆದಾಟು ಯೋಜನೆ ಕರ್ನಾಟಕದ ಭೌಗೋಳಿಕ ಪರಿಧಿಯಲ್ಲಿ ಬರುತ್ತದೆ. ಕರ್ನಾಟಕವು ಇದಕ್ಕಾಗಿ ನೆರೆರಾಜ್ಯಗಳ ಅನುಮತಿ ಪಡೆಯಬೇಕು ಎಂದು ಯಾವ ಕಾನೂನು ಹೇಳಿಲ್ಲ. ಕಾವೇರಿ ನ್ಯಾಯಾಧೀಕರಣವು ಈಗಾಗಲೇ ನೀರು ಹಂಚಿಕೆ ಮಾಡಿ ಆಗಿದೆ. ಹೀಗೆ ಯಾರ ನೀರನ್ನೂ ಯಾರೂ ಕಬಳಿಸಲು ಆಗಲ್ಲ. ಸುಪ್ರೀಂಕೋರ್ಟ್ ಕೂಡ ಕುಡಿಯುವ ನೀರು ಯೋಜನೆಗೆ ಯಾವುದೇ ಅಡಚಣೆ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.
ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್, ರಾಷ್ಟ್ರೀಯ ಜಲ ಆಯೋಗ, ಕಾವೇರಿ ಪ್ರಾಧಿಕಾರ, ಕೇಂದ್ರ ಸರ್ಕಾರ ಸೇರಿದಂತೆ ಯಾರ ಅಭ್ಯಂತರವೂ ಇಲ್ಲ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಮಾತ್ರ ಬಾಕಿ ಉಳಿದಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಯ ಡಿಪಿಆರ್ಗೆ ಅನುಮೋದನೆ ಪಡೆಯಲು ಸರ್ವ ಪ್ರಯತ್ನ: ಸಿಎಂ