ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್ ಚುನಾವಣೆಗೂ ಮುನ್ನ ಜರುಗಿದ ಪ್ರತ್ಯೇಕ ಹಿಂಸಾಚಾರ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಕಾರ್ಯಕರ್ತನೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಯಾರುಲ್ ಮೊಲ್ಲಾ (52) ಕೊಲೆಯಾದ ಟಿಎಂಸಿ ಕಾರ್ಯಕರ್ತ. ಜುಲೈ 1ರ ಶನಿವಾರ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿಯಲ್ಲಿರುವ ಫುಲ್ಮಲಾಂಚಾ ಪ್ರದೇಶದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಿಯಾರುಲ್ ಮೊಲ್ಲಾ ಅವರು ಯುವ ತೃಣಮೂಲ ಕಾಂಗ್ರೆಸ್ ಸದಸ್ಯನಾಗಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳೀಯ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ನಾಯಕರೊಬ್ಬರು, "ಮೃತ ಟಿಎಂಸಿ ನಾಯಕ ಜಿಯಾರುಲ್ ಮೊಲ್ಲಾ ಅವರು ಅಮರುಲ್ ಲಸ್ಕರ್ ಅವರ ನಿಕಟವರ್ತಿಯಾಗಿದ್ದು, "ಆಡಳಿತ ಪಕ್ಷದೊಳಗಿನ ಆಂತರಿಕ ಕಲಹಕ್ಕೆ ಬಲಿಪಶುವಾಗಿದ್ದಾರೆ" ಎಂದು ಹೇಳಿದರು.
ಭಾನುವಾರ ರಾತ್ರಿ ಮುರ್ಷಿದಾಬಾದ್ ಜಿಲ್ಲೆಯ ಸಂಸರ್‌ಗಂಜ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ನಂತರ ಕಾಂಗ್ರೆಸ್ ಕಾರ್ಯಕರ್ತ ಆರಿಫ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮತ್ತೋರ್ವ ಪೊಲೀಸ್ ಅಧಿಕಾರಿ ಹೇಳಿದರು.
ಸ್ಥಳೀಯ ಪಂಚಾಯತ್ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದಾಗ ಉಂಟಾದ ವಾಗ್ವಾದದ ವೇಳೆ ಗುಂಡು ಹಾರಿಸಲಾಗಿದೆ. ಬಳಿಕ, ಶೇಖ್ ಅವರನ್ನು ಜಂಗೀಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸದ್ಯ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : TMC leader arrested.. ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಪಿಸ್ತೂಲ್ ಇಟ್ಟುಕೊಂಡು ಬಂದಿದ್ದ ಟಿಎಂಸಿ ನಾಯಕ ಅರೆಸ್ಟ್
ಶೇಖ್ ಮೇಲಿನ ದಾಳಿಯ ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಸರ್‌ಗಂಜ್‌ನ ವಿವಿಧ ಭಾಗಗಳಲ್ಲಿ ರಸ್ತೆಗಳನ್ನು ತಡೆದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಸಂಸರ್‌ಗಂಜ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಶೇಖ್, "ಅಪ್ರಚೋದಿತ ಗುಂಡಿನ ದಾಳಿಯ ಹಿಂದೆ ಟಿಎಂಸಿ ಇದೆ" ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಟಿಎಂಸಿ ತಳ್ಳಿಹಾಕಿದೆ. ಗುಂಡಿನ ದಾಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಗ್ರಾಮೀಣ ಪಂಚಾಯತ್ ಚುನಾವಣೆಗಳಿಗೆ ಜೂನ್ 9ರಂದು ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ಅಂದಿನಿಂದ ಹಿಂಸಾಚಾರ ನಡೆಯುತ್ತಿದ್ದು, ಇದುವರೆಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರದಿಗಳು ತಿಳಿಸಿವೆ. ಈ ಮಧ್ಯೆ, ನಿನ್ನೆ ಪಶ್ಚಿಮ ಮೇದಿನಿಪುರ್ ಜಿಲ್ಲೆಯಲ್ಲಿ ಸಿಪಿಐ(ಎಂ) ಮತ್ತು ಐಎಸ್‌ಎಫ್ ಬೆಂಬಲಿಗರ ನಡುವೆ ಹಾಗೂ ಇನ್ನೊಂದು ಕಡೆ ಟಿಎಂಸಿ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಟಿಎಂಸಿ ಬಿಜೆಪಿ ಮಧ್ಯೆ ಮಾರಾಮಾರಿ.. ಆರು ಜನರಿಗೆ ಗುಂಡೇಟು, ಕಾರ್ಯಕರ್ತ ಸಾವು!