ಹೈದರಾಬಾದ್: ತೃಣಮೂಲ ಕಾಂಗ್ರೆಸ್ನಿಂದ (ಟಿಎಂಸಿ) ಸುವೇಂದು ಅಧಿಕಾರಿ ನಿರ್ಗಮಿಸಿದ್ದು, ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಕೇಸರಿ ಪಾಳಯದತ್ತ ಸಾಗಿದ್ದಾರೆ ಎಂಬ ಊಹಾಪೋಹಗಳೊಂದಿಗೆ, ತೃಣಮೂಲ ಕಾಂಗ್ರೆಸ್ ಪಕ್ಷದ ಇನ್ನಷ್ಟು ಸದಸ್ಯರು ಹಾಗೂ ಕಾರ್ಯಕರ್ತರು ಸುವೇಂದು ಅಧಿಕಾರಿಯ ದಾರಿ ಹಿಡಿಯುತ್ತಿದ್ದಾರೆ.
ಈ ನಡುವೆ ನಾಳೆ ಅಮಿತ್ ಶಾ ಮದಿನಿಪುರ ಕಾಲೇಜು ಮೈದಾನದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಇಂದು ರಾತ್ರಿ ಶಾ ಕೋಲ್ಕತ್ತಾ ತಲುಪಲಿದ್ದು, ನಾಳೆ ಮುಂಜಾನೆ ಎನ್‌ಐಎ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ನಂತರ ಅವರು ಉತ್ತರ ಕೋಲ್ಕತ್ತಾದ ಸ್ವಾಮಿ ವಿವೇಕಾನಂದರ ಪೂರ್ವಜರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಲಿದ್ದಾರೆ. ಬಳಿಕ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹುತಾತ್ಮ ಖುದಿರಾಮ್ ಬೋಸ್‌ಗೆ ಗೌರವ ಸಲ್ಲಿಸಿ, ಎರಡು ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಮದಿನಿಪುರ ತಲುಪಲಿದ್ದಾರೆ. ಅದಾದ ಬಳಿಕ ಮದಿನಿಪುರ ಕಾಲೇಜು ಮೈದಾನದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹೀಗಾಗಿ ನಾಳೆ ಸುವೇಂದು ಅಧಿಕಾರಿ ಅಮಿತ್ ಶಾರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸುವೇಂದು ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲಿದ್ದಾರೆ ಎಂಬುವುದು ಸ್ಪಷ್ಟವಾಗಿದೆ. ಸುವೇಂದು ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಬಿರುಕು ಇನ್ನಷ್ಟು ವಿಸ್ತರಿಸಿದೆ.
ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಗೆ ಪಕ್ಷದಲ್ಲಿ ನೀಡಿದ ಪ್ರಾಮುಖ್ಯತೆ ಮತ್ತು 2021ರ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ನ ಚುನಾವಣಾ ಪ್ರಚಾರದ ನಿರ್ವಹಣೆಗೆ ಪ್ರಶಾಂತ್ ಕಿಶೋರ್ ಅವರನ್ನು ಪ್ರೇರೇಪಿಸುವುದು ಪಕ್ಷದಲ್ಲಿ ಅನೇಕರಿಗೆ ಹಿಡಿಸಲಿಲ್ಲ.
ಇದೀಗ ಸುವೇಂದು ಅಧಿಕಾರಿ ಅವರೊಂದಿಗೆ 12 ಶಾಸಕರು ಜೊತೆಯಾಗುವ ಸಾಧ್ಯತೆಯೂ ಇದೆ. ಸುವೇಂದು ಪಕ್ಷ ತ್ಯಜಿಸಿದ ಕೆಲವೇ ಗಂಟೆಗಳಲ್ಲಿ, ಜಿತೇಂದ್ರ ತಿವಾರಿ, ಪಾಂಡಬೇಶ್ವರ ತೃಣಮೂಲ ಶಾಸಕ, ಬರಾಕ್‌ಪುರ ಶಾಸಕ ಶಿಲ್ಭದ್ರ ದತ್ತ ಮತ್ತು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶ್ಯಾಮಪ್ರಸಾದ್ ಮುಖೋಪಾಧ್ಯಾಯ ಕೂಡಾ ತೃಣಮೂಲ ಕಾಂಗ್ರೆಸ್ ತೊರೆದಿದ್ದಾರೆ. ಸಾರಿಗೆ ನಿಗಮದ ಅಧ್ಯಕ್ಷರಾದ ದಿಪ್ತಂಶು ಚೌಧರಿ ಕೂಡ ಅಧಿಕಾರದಿಂದ ಕೆಳಗಿಳಿದಿದ್ದಾರೆ.
ಇವರೆಲ್ಲರೂ ನಾಳೆ ಅಮಿತ್ ಶಾ ಅವರೊಂದಿಗೆ ಕೇಸರಿ ಪಾಳಯದ ವೇದಿಕೆಯಲ್ಲಿರಬಹುದು ಎಂದು ಊಹಿಸಲಾಗಿದೆ.
ಜಿತೇಂದ್ರ ಅವರೊಂದಿಗೆ, ಪಶ್ಚಿಮ ಬರ್ಧಮನ್ ಜಿಲ್ಲೆಯ ಮತ್ತೊಬ್ಬ ತೃಣಮೂಲ ಶಾಸಕ ಮತ್ತು ನಿಧನರಾಗಿರುವ ಟಿಎಂಸಿ ಶಾಸಕ ಮಾಣಿಕ್ ಉಪಾಧ್ಯಾಯ ಅವರ ಆಪ್ತ ಸಹವರ್ತಿ ಕೂಡಾ ಜೊತೆಯಾಗಬಹುದು. ಜೊತೆಗೆ ಮತ್ತೊಬ್ಬ ಟಿಎಂಸಿ ಶಾಸಕ ಮುಕುಲ್ ರಾಯ್ ಕೂಡಾ ಸಾಥ್ ನೀಡಬಹುದು.
ಹೌರಾ ಮೂಲದ ಕನಿಷ್ಠ ಇಬ್ಬರು ಟಿಎಂಸಿ ಶಾಸಕರು ಪಕ್ಷದ ಕಾರ್ಯಚಟುವಟಿಕೆಯ ವಿರುದ್ಧ ಧ್ವನಿ ಎತ್ತಿದ್ದು, ಅವರು ಕೂಡಾ ಈ ಸರದಿಯಲ್ಲಿ ಸೇರಬಹುದು. ದಕ್ಷಿಣ 24 ಪರಗಣಗಳಿಂದ ಕನಿಷ್ಠ ಒಂದು ಟಿಎಂಸಿ ಶಾಸಕ ನಾಳೆ ಮದಿನಿಪುರ ಕಾಲೇಜು ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಪುರುಲಿಯಾ ಜಿಲ್ಲೆಯ ಕಾಂಗ್ರೆಸ್ ಶಾಸಕ ಮತ್ತು ಪುರ್ಬಾ ಮದಿನಿಪುರದ ಸಿಪಿಐ (ಎಂ) ಶಾಸಕ ಈಗಾಗಲೇ ಬಿಜೆಪಿಯ ಪರ ಒಲವು ತೋರಿದ್ದಾರೆ.
ಇವರೆಲ್ಲರೂ ನಾಳೆ ಅಮಿತ್ ಶಾ ಅವರ ಮದಿನಿಪುರ ರ‍್ಯಾಲಿಯಲ್ಲಿ ಸುವೇಂದು ಅವರೊಂದಿಗೆ ಕೈ ಜೋಡಿಸಬಹುದು. ಪಶ್ಚಿಮ ಬಂಗಾಳದ ರಾಜಕೀಯ ಹೇಗೆ ವಿಭಿನ್ನ ತಿರುವು ಪಡೆದುಕೊಳ್ಳುತ್ತದೆ ಎಂದು ನೋಡಲು ನಾಳೆ ಮದಿನಿಪುರದಲ್ಲಿ ನಡೆಯಲಿರುವ ಬಿಜೆಪಿ ರ‍್ಯಾಲಿ ಮೇಲೆ ಎಲ್ಲರ ಗಮನವಿದೆ.