ಅಮೃತಸರ : ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ (ಟಿಎಲ್‌ಪಿ) ಮುಖ್ಯಸ್ಥ ಸಾದ್ ಹುಸೇನ್ ರಿಜ್ವಿ ಬಂಧನದ ನಂತರ ದೇಶದಲ್ಲಿ ಭುಗಿಲೆದ್ದಿರುವ ಪ್ರತಿಭಟನೆ ಮತ್ತು ಹಿಂಸಾಚಾರದ ನಡುವೆ ಬೈಸಾಖಿ ಪ್ರಯುಕ್ತ ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿ ಪಡೆದ 437 ಸಿಖ್ ಯಾತ್ರಿಕರು ಸುರಕ್ಷಿತರಾಗಿದ್ದಾರೆ.
ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್‌ಜಿಪಿಸಿ) ಕಾರ್ಯದರ್ಶಿ ಮೊಹಿಂದರ್ ಸಿಂಗ್ ಸಿಖ್ ಯಾತ್ರಾರ್ಥಿಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಎಲ್‌ಪಿ ನಾಯಕ ರಿಜ್ವಿ ಬಂಧನ ಮತ್ತು ಪಾಕಿಸ್ತಾನದಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಯಿಂದಾಗಿ ಪಂಜಾ ಸಾಹಿಬ್ ಗುರುದ್ವಾರಕ್ಕೆ ತೆರಳುತ್ತುದ್ದ ಸಿಖ್ ಯಾತ್ರಿಕರು ಸಿಲುಕಿದ್ದರು.
ಬಳಿಕ ಹರಸಾಹಸ ಪಟ್ಟು ಲಾಹೋರ್ ತಲುಪಲು ಅವರಿಗೆ 6 ಗಂಟೆ ಬೇಕಾಯಿತು. ಲಾಹೋರ್‌ನ ಶ್ರೀ ಡೇರಾ ಸಾಹಿಬ್‌ನಲ್ಲಿ ಅವರು ಉಳಿದುಕೊಂಡಿದ್ದರು. ನಿನ್ನೆ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಅವರು ಪಂಜಾ ಸಾಹಿಬ್ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.
ಸಿಖ್ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಪಾಕಿಸ್ತಾನ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ ಮತ್ತು ಪಾಕಿಸ್ತಾನ ಗುರುದ್ವಾರ ಪ್ರಧಾನ್ ಸತ್ವಂತ್ ಸಿಂಗ್ ಕೂಡ ಯಾತ್ರಾರ್ಥಿಗಳ ಸುರಕ್ಷಿತ ಪ್ರಯಾಣಕ್ಕೆ ಸಹಾಯ ಮಾಡಿದೆ. ಪಾಕಿಸ್ತಾನದಲ್ಲಿ ಪ್ರತಿಭಟನೆಯಿಂದಾಗಿ ಸಿಖ್ ಯಾತ್ರಾರ್ಥಿಗಳನ್ನು ತಡೆಯಲಾಗಿತ್ತು. ಆದರೆ, ಆ ಪ್ರತಿಭಟನೆಗೂ ಯಾತ್ರಾರ್ಥಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಂಗ್ ಹೇಳಿದ್ದಾರೆ.