ತಿರುಪುರ್ (ತಮಿಳುನಾಡು) : ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿದೆ. ಬೆಲೆ ಏರಿಕೆಯು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದ್ದು, ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಈ ಮಧ್ಯೆಯೇ ರೈತರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದೀಗ ತಮಿಳುನಾಡಿನ ರೈತರೊಬ್ಬರು ಒಂದೇ ದಿನದಲ್ಲಿ 4 ಲಕ್ಷ ರೂ. ಟೊಮೆಟೊ ಮಾರಾಟ ಮಾಡಿ ಅಧಿಕ ಲಾಭ ಗಳಿಸಿದ್ದಾರೆ.
ಇಲ್ಲಿನ ಗುಂಡಂ ಸಮೀಪದ ಜ್ಯೋತಿಯಂಪಟ್ಟಿಯ 27 ವರ್ಷದ ರೈತ ವೆಂಕಟೇಶ್ ಅವರು ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ತಮ್ಮ ಹತ್ತು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆಯುತ್ತಿದ್ದು, ಈ ವರ್ಷ ದರ ಏರಿಕೆಯಿಂದ ಭರ್ಜರಿ ಲಾಭ ಗಳಿಸಿದ್ದಾರೆ. ಕೇವಲ ಒಂದೇ ದಿನದಲ್ಲಿ 4 ಲಕ್ಷ ರೂ. ಸಂಪಾದಿಸಿದ್ದಾರೆ.
ತಿರುಪುರ್ ಜಿಲ್ಲೆಯ ತಾರಾಪುರಂ, ಕುಂಡಡಂ, ಪೊಂಗಲೂರ್, ಪಲ್ಲಡಂ, ಮಂಗಳಂ, ಉಡುಮಲೈ, ಮದತಿಕುಲಂ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಪ್ರಮುಖ ಉದ್ಯಮ ಎಂದರೆ ಅದು ಕೃಷಿ. ಈ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ವರ್ಷದ ಬಹುಪಾಲು ಟೊಮೆಟೊ ಮತ್ತು ಈರುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಟೊಮೆಟೊವನ್ನು ತಿರುಪುರ್ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಜೊತೆಗೆ ಇತರೆ ಜಿಲ್ಲೆಗಳಿಗೂ ಸಹ ಕಳುಹಿಸಲಾಗುತ್ತದೆ.
ಇದನ್ನೂ ಓದಿ : ಕೇವಲ ಅರ್ಧ ಎಕರೆ ಜಮೀನು.. ಬರೋಬ್ಬರಿ ₹ 11 ಲಕ್ಷ ಆದಾಯ.. ಹುಕ್ಕೇರಿ ರೈತನ ಅದೃಷ್ಟ ಬದಲಿಸಿದ ಕಿಚನ್ ಕ್ವೀನ್!
ಸದ್ಯಕ್ಕೆ ಟೊಮೆಟೊ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆ ಬೆಲೆ ಉತ್ತುಂಗದಲ್ಲಿದೆ. ಒಂದು ಕಿಲೋ ಟೊಮೆಟೊ 100 ರೂ.ಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿರುವುದರಿಂದ ತಿರುಪುರ ಮಾರುಕಟ್ಟೆಗೆ ಬರುವ ಟೊಮೆಟೊ ರೈತರು ಮತ್ತು ಮಾರಾಟಗಾರರು ಉತ್ಸಾಹದಲ್ಲಿದ್ದಾರೆ. ಪ್ರತಿ ವರ್ಷ ಟೊಮೆಟೊ ಬೆಲೆ ಕುಸಿದಾಗ ಜಿಲ್ಲೆಯ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿ ಮಾರಾಟ ಮಾಡದೇ ಬೆಳೆಯನ್ನು ರಸ್ತೆಗೆ ಎಸೆದ ಅನೇಕ ಉದಾಹರಣೆಗಳಿವೆ.
ಇದನ್ನೂ ಓದಿ : ನಸುಕಿನಲ್ಲೇ ಜಮೀನಿಗೆ ನುಗ್ಗಿ ಟೊಮೆಟೊ ಕದಿಯುತ್ತಿದ್ದ ಚಾಲಾಕಿ.. ಪ್ಲಾನ್ ಮಾಡಿ ಖದೀಮನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೈತ
ಇನ್ನು ಗುಂಡಂ ಪಕ್ಕದ ಜ್ಯೋತಿಯಂಪಟ್ಟಿಯ ರೈತ ವೆಂಕಟೇಶ್ (27) ಎಂಬುವರು ತಮ್ಮ ಸ್ವಂತ ಹತ್ತು ಎಕರೆ ಜಮೀನಿನಲ್ಲಿ ಕಳೆದ ಐದು ವರ್ಷಗಳಿಂದ ಟೊಮೆಟೊ ಕೃಷಿ ಮಾಡುತ್ತಿದ್ದಾರೆ. "ಬೆಲೆ ಏರಿಳಿತದ ನಡುವೆ ಈ ವರ್ಷ ಉತ್ತಮ ಆದಾಯ ಬಂದಿದೆ. ಒಂದೇ ದಿನದಲ್ಲಿ 15 ಕೆ.ಜಿ ಯ 260 ಬಾಕ್ಸ್ಗಳಿಗೆ 3,900 ಕೆಜಿ ಟೊಮೆಟೊ ಕಟಾವು ಮಾಡಿದ್ದು, ಒಂದು ಬಾಕ್ಸ್ 1550 ರೂ.ಗೆ ಮಾರಾಟವಾಗುತ್ತಿರುವುದು ಸಂತಸ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Tomato Price : 30 ಕೆಜಿ ಟೊಮೆಟೊ ಬಾಕ್ಸ್ ಮಾರಿದ್ರೆ 1 ಗ್ರಾಂ ಚಿನ್ನ ಖರೀದಿಸಬಹುದೆಂದ ರೈತರು!