ಹೈದರಾಬಾದ್: ಟಿಕ್‌ಟಾಕ್ ವೇದಿಕೆ ಕೆಲವರ ಪ್ರತಿಭೆಯನ್ನು ಗುರುತಿಸಿತ್ತು. ಇನ್ನೂ ಹಲವರಿಗೆ ಸ್ಟಾರ್‌ಗಿರಿ ತಂದುಕೊಟ್ಟಿತ್ತು. ಪ್ರೇಮ ಪ್ರಕರಣ, ಮೋಸ, ಮಾನಸಿಕ ದೌರ್ಜನ್ಯಗಳಿಗೂ ಇದೇ ವೇದಿಕೆ ಕುಖ್ಯಾತಿಯಾಗಿತ್ತು. ಇದಕ್ಕೊಂದು ಉದಾಹರಣೆ ಎಂಬಂತೆ ಇಲ್ಲೊಬ್ಬಳು ಯುವತಿ ಟಿಕ್‌ಟಾಕ್ ಮೂಲಕ ಹನಿಟ್ರ್ಯಾಪ್ಗೆ ಮುಂದಾಗಿದ್ದಾಳೆ.
ಪರಸ ತನುಶ್ರೀ (23) ಮತ್ತು ಆಕೆಗೆ ಸಹಾಯ ಮಾಡುತ್ತಿದ್ದ ಪರಸ ರವಿತೇಜ(32) ಮದುವೆ ಹೆಸರಿನಲ್ಲಿ ಲಕ್ಷಾಂತರ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು. ಇದೀಗ ಅವರಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಏನಿದು ಹನಿಟ್ರ್ಯಾಪ್?: ಸೌಂದರ್ಯ, ನಟನೆಯಿಂದ ಟಿಕ್‌ಟಾಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಂಡಿರುವ ಈಕೆ ಸುಲಭವಾಗಿ ಹಣ ಗಳಿಸುವ ವಂಚನೆಗೆ ಕೈ ಹಾಕಿದ್ದಾಳೆ. ತನುಶ್ರೀ ಇನ್ಸ್ಟಾಗ್ರಾಂನಲ್ಲಿ ನಾಲ್ಕು ಖಾತೆಗಳನ್ನು ತೆರೆದು ಸಿನಿಮಾ ಹಾಡುಗಳು ಮತ್ತು ಸಂಭಾಷಣೆಗಳನ್ನು ಅನುಕರಿಸುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಇವಳ ಅಂದಕ್ಕೆ ಮನಸೋತ ಹುಡುಗರು ಆಕೆಯನ್ನು ಫಾಲೋ ಮಾಡುವುದರೊಂದಿಗೆ ಕಮೆಂಟ್ಗಳನ್ನು ಮಾಡುತ್ತಿದ್ದರು.
ಈ ನಡುವೆ ಒಬ್ಬ ಹೈದರಾಬಾದ್ ವ್ಯಕ್ತಿಯೊಂದಿಗೆ ಆಕೆ ಸ್ನೇಹವನ್ನು ಬೆಳೆಸಿಕೊಂಡಿದ್ದಳು. ಕುರುಡು ಪ್ರೀತಿಯಲ್ಲಿ ಬಿದ್ದ ಆತ ಮದುವೆ ಪ್ರಸ್ತಾಪವನ್ನು ಆಕೆಯ ಮುಂದಿಟ್ಟಿದ್ದ. ಇದಕ್ಕೆ ಒಪ್ಪಿದ ಆಕೆ ತನ್ನ ತಾಯಿಗೆ ಅನಾರೋಗ್ಯ ಎಂಬ ಸುಳ್ಳು ಕಾರಣವನ್ನು ಹೇಳುತ್ತಾ ಕೇವಲ ಎಂಟು ತಿಂಗಳಲ್ಲಿ 31.66 ಲಕ್ಷ ರೂ ಹಣ ವಸೂಲಿ ಮಾಡಿದ್ದಾಳೆ. ಬಳಿಕ ಇದು ವಂಚನೆ ಎಂದರಿತ ಯುವಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.
ಇದನ್ನೂ ನೋಡಿ:ಹೆಂಡತಿಯನ್ನು ಬರ್ಬರವಾಗಿ ಕೊಂದು ತುಂಡು ತುಂಡಾಗಿ ಕತ್ತರಿಸಿದ ಪತಿ!