ಜಮ್ಮು: ಜಮ್ಮುವಿನ ಹೆದ್ದಾರಿ ಪಕ್ಕದಲ್ಲಿ ಟಿಫಿನ್ ಬಾಕ್ಸ್ವೊಂದರಲ್ಲಿ ಸುಧಾರಿತ ಸ್ಪೋಟಕ ಸಾಧನ (ಐಇಡಿ) ಪತ್ತೆಯಾಗಿದೆ. ಈ ಕುರಿತು ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿತು. ಜಮ್ಮುವಿನ ಪೊಲೀಸ್ ಚೆಕ್ಪೋಸ್ಟ್ ಸಮೀಪದ ಸಿಧ್ರಾ ನರ್ವಾಲ್ ಹೆದ್ದಾರಿ ಬದಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಟಿಫಿನ್ ಬಾಕ್ಸ್ವೊಂದರಲ್ಲಿ ಸುಧಾರಿತ ಸ್ಪೋಟಕ ಸಾಧನ ಇರುವುದು ಗೊತ್ತಾಗಿದೆ. ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಿತು.
ಟಿಫಿನ್ ಬಾಕ್ಸ್ನಲ್ಲಿ 2 ಕೆ.ಜಿ ತೂಕದ ಸ್ಪೋಟಕ ದೊರೆತಿದ್ದು, ಟೈಮರ್ ಅಳವಡಿಸಲಾಗಿತ್ತು. ಈ ವಸ್ತು ಎಲ್ಲಿಂದ ಬಂತು, ಯಾರು ಇಲ್ಲಿ ತಂದು ಹಾಕಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಜಮ್ಮು ಮತ್ತು ಪೂಂಚ್ ಹೆದ್ದಾರಿಯಲ್ಲಿ ಇದೇ ರೀತಿಯ ಟಿಫಿನ್ ಬಾಕ್ಸ್ನಲ್ಲಿ ಬಚ್ಚಿಟ್ಟ ಮಾದರಿಯಲ್ಲಿ ಐಇಡಿ ಸಿಕ್ಕಿತ್ತು. ಇಲ್ಲಿನ ನಾರಿಯನ್ನ ಕಲ್ವರ್ಟ್ ಎಂಬಲ್ಲಿ ಈ ಸುಧಾರಿತ ಸ್ಪೋಟಕ ಕಂಡುಬಂದಿತ್ತು. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ ಸ್ಪೋಟಕವನ್ನು ನಿಷ್ಕ್ರಿಯಗೊಳಿಸಿತ್ತು.
ಚಂಡೀಗಢದಲ್ಲೂ ಟಿಫಿನ್ ಮಾದರಿ ಸ್ಪೋಟಕ ಪತ್ತೆ: ಇಲ್ಲಿನ ಫಿರೋಜ್ ಜಿಲ್ಲೆಯ ಭಾರತ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿರುವ ಕೃಷಿ ಜಮೀನಿನಲ್ಲಿ ಟಿಫಿನ್ ಬಾಕ್ಸ್ನಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ವಸ್ತುವನ್ನು ಪಂಜಾಬ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಮೂಲಕ ಸಂಭಾವ್ಯ ಸ್ಪೋಟವನ್ನು ತಪ್ಪಿಸಿದ್ದಾರೆ. ಇಲ್ಲಿನ ಅಲಿ ಕೆ ಗ್ರಾಮದಲ್ಲಿ ಸ್ಪೋಟಕವನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮುನ್ನ ಜಲಾಲಬಾದ್ನಲ್ಲಿ ನಡೆದ ಸ್ಪೋಟ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಜಲಾಲಬಾದ್ ಸ್ಪೋಟ ಪ್ರಕರಣದಲ್ಲಿ ಆರೋಪಿ ರಂಜೀತ್ ಸಿಂಗ್ ಅಲಿಯಾಸ್ ಗೋರಾ ಎಂಬಾತನಿಗೆ ಆಶ್ರಯ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ಫಿರೋಜ್ಪುರ್ನ ಜಸ್ವಂತ್ ಸಿಂಗ್ ಅಲಿಯಾಸ್ ಶಿಂದಾ ಬಾಬಾ ಹಾಗೂ ಲೂಧಿಯಾನದ ಬಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ರಂಜೀತ್ ಸಿಂಗ್ ಅಲಿಯಾಸ್ ಗೋರಾನನ್ನು ಈಗಾಗಲೇ ಬಂಧಿಸಲಾಗಿದೆ ಎಂದರು.
ಬಂಧಿತರಿಂದ ಈ ಹಿಂದೆ ಟಿಫಿನ್ ಬಾಂಬ್, 2 ಪೆನ್ ಡ್ರೈವ್, 1.15 ಲಕ್ಷ ನಗದು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯಲ್ಲಿ ಆರೋಪಿಗಳು ಕೃಷಿ ಜಮೀನಿನಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಬಗ್ಗೆ ಮಾಹಿತಿ ನೀಡಿದ್ದು, ಸ್ಪೋಟಕವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎನ್ಐಎ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಅಮೃತ್ಸರ್, ಕಪೂರ್ತಲ, ಫಾಜಿಲ್ಕಾ, ತರನ್ ತರನ್ ವಿವಿಧೆಡೆ ಟಿಫಿನ್ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಸ್ಪೋಟಕ ವಸ್ತುಗಳು ಪತ್ತೆ