ಧರ್ಮಶಾಲಾ (ಹಿಮಾಚಲಪ್ರದೇಶ): ಟಿಬೆಟಿಯನ್ ಸಂಸ್ಕೃತಿಯನ್ನು ಅಳಿಸಿಹಾಕಲು ಚೀನಾ ಮಾಡುತ್ತಿರುವ ನಿರಂತರ ಪ್ರಯತ್ನಗಳ ಕುರಿತು ದೆಹಲಿಯ ಜಿ20 ಶೃಂಗಸಭೆಯಲ್ಲಿ ಭಾಗವಹಿಸಿರುವ ವಿಶ್ವ ನಾಯಕರು ಚರ್ಚಿಸಬೇಕು ಎಂದು ಒತ್ತಾಯಿಸಿ ಮೆಕ್ಲಿಯೋಡ್‌ಗಂಜ್‌ನಲ್ಲಿ ಟಿಬೆಟಿಯನ್ ಕಾರ್ಯಕರ್ತರು ಇಂದು ಪ್ರತಿಭಟನೆ ಮಾಡಿದ್ದಾರೆ.
ಚೀನಾ ಸರ್ಕಾರ ತಮ್ಮ ಶಿಕ್ಷಣದ ವ್ಯವಸ್ಥೆ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಜತೆಗೆ ಟಿಬೆಟಿಯನ್ ಸಂಸ್ಕೃತಿ ಮತ್ತು ಗುರುತನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಚೀನಾದ ಈ ನಡುಗೆ ವಿರುದ್ಧ ವಿಶ್ವ ನಾಯಕರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಚೀನಾ, ಟಿಬೆಟ್ನಲ್ಲಿ ವಸಾಹತುಶಾಹಿ ಶೈಲಿಯ ಬೋರ್ಡಿಂಗ್ ಶಾಲೆಗಳನ್ನು ಸ್ಥಾಪಿಸಿದೆ. ಅಲ್ಲಿ ನಾಲ್ಕು ವರ್ಷ ವಯಸ್ಸಿನ ಟಿಬೆಟಿಯನ್ ಮಕ್ಕಳನ್ನು ಅವರ ಕುಟುಂಬಗಳಿಂದ ಬೇರ್ಪಡಿಸಿ ಈ ಶಾಲೆಗಳಿಗೆ ಬಲವಂತವಾಗಿ ಸೇರಿಸಲಾಗುತ್ತಿದೆ. ಆ ಮಕ್ಕಳು ಕೇವಲ ಕುಟುಂಬದೊಂದಿಗಿನ ಸಂಬಂಧವನ್ನು ಮಾತ್ರ ಕಳೆದುಕೊಳ್ಳದೇ ಭಾಷೆ ಮತ್ತು ಇಲ್ಲಿಯ ಸಂಸ್ಕೃತಿಯಿಂದಲೂ ಪ್ರತ್ಯೇಕ ಮಾಡಲಾಗುತ್ತಿದೆ ಎಂದು ಎಂದು ಸ್ಟೂಡೆಂಟ್ಸ್ ಫಾರ್ ಫ್ರೀ ಟಿಬೆಟ್ (ಭಾರತ) ರಾಷ್ಟ್ರೀಯ ನಿರ್ದೇಶಕ ಟೆನ್‌ಜಿನ್ ಪಸಾಂಗ್ ಹೇಳಿದ್ದಾರೆ.
ಬಳಿಕ ಸ್ಟೂಡೆಂಟ್ಸ್ ಫಾರ್ ಫ್ರೀ ಟಿಬೆಟ್-ಭಾರತ ಅಭಿಯಾನದ ನಿರ್ದೇಶಕ ಟೆನ್ಜಿನ್ ಲೆಕ್ಡೆನ್ ಮಾತನಾಡಿ, "ಪ್ರಸ್ತುತ ಟಿಬೆಟ್ನಲ್ಲಿ ನಡೆಯುತ್ತಿರುವ ಈ ಘಟನೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ಜಿ20 ಶೃಂಗಸಭೆಯ ನಾಯಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ ಈ ವಸಾಹತುಶಾಹಿ ಬೋರ್ಡಿಂಗ್ ಶಾಲೆ ಮತ್ತು ಟಿಬೆಟ್ನಲ್ಲಿನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವಿಶ್ವನಾಯಕರು ಚರ್ಚಿಸಲು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಜಿ20 ಸಭೆಯಲ್ಲಿ 'ಒನ್ ಅರ್ಥ್' (ಒಂದು ಭೂಮಿ) ವಿಷಯದ ಕುರಿತು ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ ಅವರು ಆಹಾರ, ಜೀವನೋಪಾಯ ಮತ್ತು ಪರಿಸರದಲ್ಲಿನ ನಿರ್ಣಾಯಕ ಸವಾಲುಗಳನ್ನು ಎದುರಿಸಲು ವಿಶ್ವದ ಶಾಶ್ವತ ನಂಬಿಕೆ ಮತ್ತು ಶಾಂತಿಯನ್ನು ಸಾರುವ ವ್ಯವಸ್ಥೆಯ ಬಗ್ಗೆ ಮಾತನಾಡಿದರು. ಬಳಿಕ ಲೈಫ್ ಮಿಷನ್ ಮತ್ತು ಗ್ರೀನ್ ಗ್ರಿಡ್ಸ್ ಪರಿಣಾಮಕಾರಿ ಉಪಕ್ರಮಗಳಲ್ಲಿ ಭಾರತವು ಹೇಗೆ ಕೆಲಸ ಮಾಡಿದೆ ಎಂಬುದನ್ನು ಮೋದಿ ವಿಶ್ವ ನಾಯಕರಿಗೆ ವಿವರಿಸಿದರು.
ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಸೌದಿ ಅರೇಬಿಯಾ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್, ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಹಾಗೂ ಇತರು ಜಾಗತಿಕ ನಾಯಕರು ಭಾಗವಹಿಸಿದ್ದರು.
ಇದನ್ನೂ ಓದಿ: ದಾಖಲೆ ಸೃಷ್ಟಿಸಿದ ಭಾರತ ಅಧ್ಯಕ್ಷತೆಯ ಜಿ-20 ಶೃಂಗಸಭೆ: 73 ಘೋಷಣೆಗಳಿಗೆ ವಿಶ್ವ ನಾಯಕರ ಒಮ್ಮತ