ಕೃಷ್ಣಾ: ದೊಡ್ಡದೊಡ್ಡ ಮೀನುಗಳನ್ನು ಹಿಡಿಯುವ ಆಸೆಯಿಂದ ನದಿಗೆ ಹಾರಿದ ಮೂವರು ಯುವಕರು ನೀರುಪಾಲಾಗಿದ್ದಾರೆ. ಈ ದುರ್ಘಟನೆ ಆಂಧ್ರಪ್ರದೇಶದ ಪೆದಪುಲಿಪಾಕದ ಬಳಿ ನಡೆದಿದೆ.
ಮೃತ ಯುವಕರನ್ನು ತಾಡಿಗಡಪ ಕಾರ್ಮಿಕನಗರದ ಪಾತರ್ಲಂಕ ಜೈಸಾಯಿ ಶ್ರೀನಿವಾಸ್ (25), ಗುರುನಾನಕ್ ನಗರದ ಕರಿಮೆರಕಲ ಗೋವಿಂದು (22), ರಾಮವರಪ್ಪಾಡು ನಿವಾಸಿ ಕರಿಮೆರಕಲ ಸತೀಶ್ (21) ಎಂದು ಗುರುತಿಸಲಾಗಿದೆ.
ಸ್ನೇಹಿತರಾದ ಜೈಸಾಯಿ ಶ್ರೀನಿವಾಸ್, ಗೋವಿಂದು, ಸತೀಶ್ ಮತ್ತು ಎಪಿಎಲ್ಐಸಿ ನಗರದ ಪೊಲಗಾನಿ ಶಿವಲು ರವಿವಾರ ಮಧ್ಯಾಹ್ನ 3 ಗಂಟೆಗೆ ಕೃಷ್ಣಾ ನದಿಯಲ್ಲಿ ಈಜಾಡಲು ತೆರಳಿದ್ದಾರೆ. ಶಿವ ನದಿ ತೀರದಲ್ಲಿ ಉಳಿದಿದ್ದ. ಶ್ರೀನಿವಾಸ್, ಗೋವಿಂದು, ಸತೀಶ್ ಮೂವರು ನದಿಯೊಳಗೆ ಹೋಗಿ ಈಜಾಡುತ್ತಿದ್ದರು. ಈ ವೇಳೆ ಇವರಿಗೆ ನೀರಿನಲ್ಲಿ ದೊಡ್ಡ ಮೀನುಗಳು ಕಂಡಿವೆ. ಮೀನುಗಳನ್ನು ಹಿಡಿಯಲು ಮುಂದಾದಾಗ 20 ಅಡಿಗಳ ಆಳದಲ್ಲಿ ಮೂವರು ಸಿಲುಕಿಕೊಂಡು ಪ್ರಾಣತೆತ್ತಿದ್ದಾರೆ.
ಬಹಳ ಸಮಯ ಕಳೆದರೂ ಸಹ ನೀರಿನಿಂದ ಮೇಲೆ ಬರದ ಕಾರಣ ಶಿವು ಸ್ಥಳೀಯರ ನೆರವಿನಿಂದ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಸಂಜೆ ಆರು ಗಂಟೆಯ ಸಮಯದಲ್ಲಿ ಮೂವರು ಮೃತದೇಹಗಳನ್ನು ನೀರಿನಿಂದ ಹೊರ ತೆಗೆದರು.