ಅಮೃತಸರ್(ಪಂಜಾಬ್) : ಭಾರತ ಸರ್ಕಾರ ಪಾಕ್ ಮೇಲೆ ಮತ್ತೊಮ್ಮೆ ಔದಾರ್ಯ ಮೆರೆದಿದೆ. ಭಾರತದ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ ಪಾಕಿಸ್ತಾನದ ಮೂವರನ್ನ ಪಂಜಾಬ್ನ ಅಟ್ಟಾರಿ-ವಾಘಾ ಗಡಿ ಮೂಲಕ ತಾಯ್ನಾಡಿಗೆ ವಾಪಸ್ ಕಳುಹಿಸಲಾಗಿದೆ. ಇದರಲ್ಲಿ ಓರ್ವ ಮಹಿಳೆ ಸಹ ಸೇರಿಕೊಂಡಿದ್ದಾರೆ.
ಬೆಂಗಳೂರಿನ ಜೈಲಿನಲ್ಲಿದ್ದ ಮಹಿಳೆ ಸಮೀರಾ ಹಾಗೂ ಆಕೆಯ ಮಗಳು ಫಾತಿಮಾ ಅಟ್ಟಾರಿ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದರು. 28 ವರ್ಷದ ಸಮೀರಾ ಅಬ್ದುಲ್ಲಾ 2017ರಲ್ಲಿ ಅಕ್ರಮವಾಗಿ ಭಾರತದೊಳಗೆ ಪ್ರವೇಶ ಮಾಡಿ, ತನ್ನ ಗಂಡ ಮೊಹಮ್ಮದ್ನೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಆದರೆ, ಆಕೆಯನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಜೈಲಿನಲ್ಲಿದ್ದಾಗಲೇ ಸಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಅದಕ್ಕೆ ಫಾತೀಮಾ ಎಂದು ನಾಮಕರಣ ಮಾಡಲಾಗಿತ್ತು.
ಇದನ್ನೂ ಓದಿ: ಭೋಪಾಲಿ ಎಂದರೆ 'ಸಲಿಂಗಿ' ಎಂದ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಕರಣ ದಾಖಲು
ಬಂಧನಕ್ಕೊಳಗಾಗಿದ್ದ ಮಹಿಳೆಯನ್ನ 2018ರಲ್ಲೇ ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಮುಂದಾಗಿತ್ತು. ಆದರೆ, ಪಾಕಿಸ್ತಾನದಿಂದ ಯಾವುದೇ ರೀತಿಯ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಕಳೆದ ಫೆ. 2022ರಲ್ಲಿ ಪಾಕಿಸ್ತಾನದಿಂದ ಒಪ್ಪಿಗೆ ಸಿಕ್ಕಿದ್ದು, ಇದೀಗ ಮರಳಿ ಸ್ವದೇಶಕ್ಕೆ ತೆರಳಿದ್ದಾಳೆ. ಮತ್ತೊಂದು ಪ್ರಕರಣದಲ್ಲಿ 21 ವರ್ಷಗಳ ಕಾಲ ಘರಿಂಡಾ ಪೊಲೀಸ್ ಠಾಣೆಯಲ್ಲಿ ಜೈಲು ಶಿಕ್ಷೆ ಅನುಭವಿಸಿರುವ ವ್ಯಕ್ತಿ ಹಾಗೂ ಹರಿಯಾಣದ ಜೈಲಿನಲ್ಲಿದ್ದ ಮತ್ತೋರ್ವ ಕೈದಿ ಇದೀಗ ಪಾಕಿಸ್ತಾನಕ್ಕೆ ತೆರಳಿದ್ದಾರೆ.