ಜಾಂಜಗೀರ್ ಚಾಂಪಾ (ಛತ್ತೀಸ್ಗಢ ) : ಮದ್ಯಪಾನ ಮಾಡಿದ ಪರಿಣಾಮ ಒಂದು ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢ ಜಾಂಜಗೀರ್ ಚಾಂಪಾ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಅಕಲ್ತಾರದ ಪರ್ಸಾಹಿಬಾನ ಗ್ರಾಮದ ಸಂಜಯ್ ಸಂದೆ, ಸಂತ್ ಕುಮಾರ್ ಸಂದೆ ಹಾಗೂ ಜಿತೇಂದ್ರ ಸೋಂಕರ್ ಎಂದು ಗುರುತಿಸಲಾಗಿದೆ.
ಇಂದು ಬೆಳಿಗ್ಗೆ ಸಂಜಯ್, ಸಂತ್ ಹಾಗೂ ಜಿತೇಂದ್ರ ಅವರು ಗ್ರಾಮದ ಕೆರೆಯ ಬಳಿಗೆ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ದಾರಿ ಮಧ್ಯೆ ಈ ಮೂವರು ಮದ್ಯಪಾನ ಮಾಡಿದ್ದರು. ಮದ್ಯ ಸೇವಿಸಿದ ಬಳಿಕ ಮೂವರು ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಜೊತೆಗಿದ್ದವರು ಇವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಈ ಮೂವರನ್ನು ಅಕಲ್ತಾರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ಅದಾಗಲೇ ಸಂತ್ ಮತ್ತು ಸಂಜಯ್ ಕುಮಾರ್ ಮೃತಪಟ್ಟಿದ್ದರು. ಇನ್ನು ಗಂಭೀರ ಸ್ಥಿತಿಯಲ್ಲಿದ್ದ ಜಿತೇಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಿಲಾಸ್ಪುರದ ಸಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೂವರು ಸೇವಿಸಿದ ಮದ್ಯದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಇದರಲ್ಲಿ ಏನಾದರೂ ಮಿಶ್ರಣಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಕಲ್ತಾರ ಆರೋಗ್ಯ ಅಧಿಕಾರಿ ಮಹೇಂದ್ರ ಸೋನಿ, ಈ ಮೂವರಿಗೆ ಮದ್ಯಪಾನ ಮಾಡಿದ ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಅಲ್ಲದೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು. ವಿಷಪೂರಿತ ಮದ್ಯ ಸೇವನೆಯಿಂದ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಬಿಜೆಪಿ ಖಂಡನೆ : ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಜನಿ ಸಾಹು ಅವರು ಇದು ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ. ಸಿಎಂ ಭೂಪೇಶ್ ಬಘೇಲ್ ಅವರು ಮದ್ಯ ನಿಷೇಧದ ಭರವಸೆ ನೀಡಿದ್ದರು. ಆದರೆ, ರಾಜ್ಯದಲ್ಲಿ ವ್ಯಾಪಕವಾಗಿ ಮದ್ಯ ಮಾರಾಟ ನಡೆಯುತ್ತಿದ್ದು ಜನರು ಸಾಯುತ್ತಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ : ಶಿವನಸಮುದ್ರದಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿಗೆ ಬಿದ್ದ ಯುವಕ ಸಾವು : ಮತ್ತೋರ್ವ ಪಾರು