ನವದೆಹಲಿ: ಇಂದು ಮೂರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ವಾಯುಪಡೆಯ ಮಿಡೇರ್ ಇಂಧನ ತುಂಬುವಿಕೆಯ ಬೆಂಬಲದೊಂದಿಗೆ ಫ್ರಾನ್ಸ್‌ನಿಂದ ನೇರವಾಗಿ ಹಾರಾಟ ನಡೆಸಲಿವೆ.
ಮೂರು ವಿಮಾನಗಳು ಬೆಳಗ್ಗೆ 7 ಗಂಟೆಗೆ ಬೋರ್ಡೆಕ್ಸ್‌ನ ಮೆರಿಗ್ನಾಕ್ ಏರ್‌ಬೇಸ್‌ನಿಂದ ಹೊರಟು ಸಂಜೆ 7 ಗಂಟೆಗೆ ಗುಜರಾತ್ ತಲುಪಲಿವೆ. ಬಳಿಕ ವಿಮಾನಗಳು ಅಂಬಾಲಾಗೆ ಹಾರಲಿದ್ದು, ಗೋಲ್ಡನ್ ಆರೋಸ್ ಸ್ಕ್ವಾಡ್ರನ್ ಸೇರಿಕೊಳ್ಳಲಿವೆ. ಇದುವರೆಗೆ ಒಟ್ಟು 11 ರಫೇಲ್ ಜೆಟ್‌ಗಳು ಸ್ಕ್ವಾಡ್ರನ್‌ನ ಭಾಗವಾಗಿದ್ದು, ಅದು 14ಕ್ಕೆ ಏರಿಕೆಯಾಗಲಿದೆ.
ಈ ಹಿಂದೆ ಕಳೆದ ವರ್ಷ ಜುಲೈ 29ರಂದು ರಫೇಲ್ ವಿಮಾನಗಳ ಮೊದಲ ಬ್ಯಾಚ್ ಆಗಮಿಸಿತ್ತು. ಬಳಿಕ ನವೆಂಬರ್ 3ರಂದು ಮೂರು ರಫೇಲ್ ಜೆಟ್‌ಗಳ ಎರಡನೇ ಬ್ಯಾಚ್ ಹಾಗೂ ನಂತರ ಮೂರನೇ ಬ್ಯಾಚ್ನ ಮೂರು ಜೆಟ್‌ಗಳು ಜನವರಿ 27ರಂದು ಐಎಎಫ್‌ಗೆ ಸೇರ್ಪಡೆಗೊಂಡಿದ್ದವು. ಒಟ್ಟೂ 36 ಜೆಟ್‌ಗಳಿಗೆ 59,000 ಕೋಟಿ ರೂ.ಗಳ ಒಪ್ಪಂದಕ್ಕೆ ಇದಾಗಿದೆ.
ಏಪ್ರಿಲ್ ಅಂತ್ಯದ ವೇಳೆಗೆ ಇನ್ನೂ 5 ರಫೇಲ್ ಜೆಟ್‌ಗಳನ್ನು ಭಾರತಕ್ಕೆ ಕಳಿಸಲಾಗುವುದು ಎಂದು ಭಾರತದ ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಮಂಗಳವಾರ ಹೇಳಿದ್ದಾರೆ. ಇಂದು ಆಗಮಿಸುತ್ತಿರುವ ಮೂರು ರಫೇಲ್ ಹೊರತುಪಡಿಸಿ 5 ವಿಮಾನಗಳು ಭಾರತಕ್ಕೆ ಆಗಮಿಸಲಿವೆ. ಕೊರೊನಾ ನಡುವೆಯೂ ನಿಗದಿತ ಸಮಯಕ್ಕೆ ಮುನ್ನವೇ ವಿಮಾನಗಳನ್ನು ಭಾರತಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ. 2022ರ ವೇಳೆಗೆ ಒಟ್ಟೂ 36 ವಿಮಾನಗಳನ್ನೂ ಒಪ್ಪಂದದ ಪ್ರಕಾರ ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ನಿವೃತ್ತ ಯೋಧರಿಗೆ ಜಮೀನು ಮಂಜೂರು ವಿಳಂಬ : ಮೈಸೂರು ಜಿಲ್ಲಾಧಿಕಾರಿ ರೋಹಿಣಿಗೆ ಹೈಕೋರ್ಟ್ ತರಾಟೆ