ಚಿಂದ್ವಾರ್(ಮಧ್ಯಪ್ರದೇಶ): ಶಿವನ ದೇಗುಲಕ್ಕೆ ತೆರಳಿ ಹಿಂತಿರುಗಿ ಬರುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡು ಬಾವಿಗೆ ಬಿದ್ದಿರುವ ಪರಿಣಾಮ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಈಗಾಗಲೇ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರ್ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ಮನೆಯಿಂದ ಹೋಗಿರುವ ಮೂವರು ಮಕ್ಕಳು ಗಾರ್ಬೆಟಾದಲ್ಲಿನ ಶಿವನ ದೇವಸ್ಥಾನಕ್ಕೆ ತೆರಳಿದ್ದರು. ಯಶ್ ಸಾಹು, ಕಾರ್ತಿಕ್ ವರ್ಮಾ ಹಾಗೂ ಶ್ರೇಯಸ್ ಯಾದವ್ ಒಟ್ಟಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಸೈಕಲ್ ಮೇಲೇರಿ ಅಲ್ಲಿಂದ ವಾಪಸ್ ಬರುತ್ತಿದ್ದ ಸಂದರ್ಭ ಏಕಾಏಕಿ ನಿಯಂತ್ರಣ ಕಳೆದುಕೊಂಡು, ಪರ್ವತದ ಕೆಳಗಿನ ಸಣ್ಣ ಬಾವಿಗೆ ಬಿದ್ದರು.
ಇದನ್ನೂ ಓದಿ: ರಾಜ್ ಕುಂದ್ರಾಗೆ ಜೈಲೇ ಗತಿ..14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ
ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಆದರೆ ಇವರ ಬಗ್ಗೆ ಸುಳಿವು ಸಿಗದ ಕಾರಣ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದಾಗ ಅವರ ಸೈಕಲ್ ಪರ್ವತದ ಕೆಳಗಿನ ಬಾವಿ ಹೊರಗೆ ಬಿದ್ದಿರುವುದು ಕಂಡು ಬಂದಿದೆ. ಅಲ್ಲಿಗೆ ಹೋಗಿ ನೋಡಿದಾಗ ಯಶ್, ಕಾರ್ತಿಕ್ ಹಾಗೂ ಶ್ರೇಯಸ್ ಮೃತದೇಹಗಳು ಸಿಕ್ಕಿವೆ. ಒಂದೇ ದಿನ ಮೂವರು ಮಕ್ಕಳು ಸಾವನ್ನಪ್ಪಿರುವುದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಕೂಡ ಆಘಾತಕ್ಕೊಳಗಾಗಿದ್ದಾರೆ.