ರಾಜ್ಕೋಟ್ (ಗುಜರಾತ್): ಕಳೆದ 10 ವರ್ಷಗಳಿಂದ ಕೋಣೆಯೊಂದರಲ್ಲಿ ಮೂವರು ಮಾನಸಿಕ ಅಸ್ವಸ್ಥರು ಲಾಕ್ ಆಗಿದ್ದ ಶಾಕಿಂಗ್ ಘಟನೆಯೊಂದು ಗುಜರಾತ್ನ ರಾಜ್ಕೋಟ್ನಲ್ಲಿ ಬೆಳಕಿಗೆ ಬಂದಿದ್ದು, ಇದೀಗ ಅವರನ್ನು ರಕ್ಷಿಸಲಾಗಿದೆ.
ಇವರ ತಂದೆ ನೀಡಿದ ಮಾಹಿತಿ ಮೇರೆಗೆ ರಾಜ್ಕೋಟ್ನ 'ಸಾಥಿ ಸೇವಾ ತಂಡ' (ಎನ್ಜಿಒ) ಭಾನುವಾರ ಸಂಜೆ ಸಂತ್ರಸ್ತರನ್ನು ರಕ್ಷಿಸಿದೆ. ಉದ್ದನೆಯ ಸಿಕ್ಕುಸಿಕ್ಕಾದ ಕೂದಲು ಹಾಗೂ ಗಡ್ಡ ಬೆಳೆದಿತ್ತು. ಎದ್ದು ನಿಲ್ಲುವಷ್ಟು ಶಕ್ತಿ ಮೂವರಲ್ಲಿರಲಿಲ್ಲ. ನಮ್ಮ ಸದಸ್ಯರು ಈ ಮೂವರನ್ನು ಹೊರಗೆ ಕರೆತಂದು ಸ್ವಚ್ಛಗೊಳಿಸಿದ್ದಾರೆ ಎಂದು ಎನ್ಜಿಒ ಅಧಿಕಾರಿ ಜಲ್ಪಾ ಪಟೇಲ್ ಮಾಹಿತಿ ನೀಡಿದ್ದಾರೆ.
ಒಡಹುಟ್ಟಿದವರಾದ ಅಂಬರೀಶ್ (42), ಭಾವೇಶ್ ಹಾಗೂ ಇವರ ಸಹೋದರಿ ಮೇಘನಾ (39) ಎಂಬುವರು ದಶಕದ ಹಿಂದೆ ತಾವೇ ಬಾಗಿಲು ಲಾಕ್ ಮಾಡಿಕೊಂಡು ಕೋಣೆಯೊಳಗೆ ಬಂಧಿಯಾಗಿದ್ದರು. ತಮ್ಮ ತಾಯಿಯ ಮರಣದ ನಂತರ ಇವರು ಮಾನಸಿಕ ಅಸ್ವಸ್ಥರಾಗಿದ್ದು, ಈ ನಿರ್ಧಾರ ತೆಗೆದುಕೊಂಡಿದ್ದರು.
ನಾನು ಪ್ರತಿನಿತ್ಯ ಬಾಗಿಲ ಹೊರಗಡೆ ಆಹಾರವನ್ನು ತಂದಿಡುತ್ತಿದ್ದೆ ಎಂದು ನಿವೃತ್ತ ಸರ್ಕಾರಿ ನೌಕರರಾಗಿರುವ ಈ ಮೂವರ ತಂದೆ ಹೇಳುತ್ತಾರೆ. ಆದರೆ, ಇದು ಸುಳ್ಳೋ ನಿಜವೋ ಎಂಬುದು ತಿಳಿದು ಬಂದಿಲ್ಲ.
ಇದನ್ನೂ ಓದಿ: 'ನ್ಯುಮೋಸಿಲ್' ಲಸಿಕೆ ಬಿಡುಗಡೆಗೊಳಿದ ಸಚಿವ ಡಾ.ಹರ್ಷವರ್ಧನ್
ನನ್ನ ಹಿರಿಯ ಮಗ ಅಂಬರೀಶ್ ಬಿಎ, ಎಲ್ಎಲ್ಬಿ ಪದವಿ ಪಡೆದಿದ್ದಾರೆ. ಮೇಘನಾ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಕಿರಿಯ ಮಗ ಭಾವೇಶ್ ಬಿ.ಎ ಪದವಿ ಪಡೆದಿದ್ದು, ಭರವಸೆಯ ಕ್ರಿಕೆಟ್ ಆಟಗಾರ. ಇವರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಬೇಕು ಎಂದು ತಂದೆ ಹೇಳುತ್ತಾರೆ. ಆದರೆ, ಈವರೆಗೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.