ಉನ್ನಾವೋ: ಹುಲ್ಲು ತರಲು ಹೋದ ಮೂವರು ಬಾಲಕಿಯರು ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದಾಗ ಹೊಲವೊಂದರಲ್ಲಿ ತಮ್ಮ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿರುವ ಘಟನೆ ಉನ್ನಾವೋದ ಅಸೋಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂವರು ಬಾಲಕಿಯರು ಬುಧವಾರ ಹುಲ್ಲು ತರಲು ತೆರಳಿದ್ದರು. ಬಾಲಕಿಯರು ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಪೋಷಕರು ಮತ್ತು ಸಂಬಂಧಿಗಳು ಹುಡುಕಾಟ ನಡೆಸಿದ್ದರು. ಹೊಲವೊಂದರಲ್ಲಿ ಅವರದ್ದೇ ವೇಲ್ನಿಂದ ಬಾಲಕಿಯರನ್ನು ಕಟ್ಟಿ ಹಾಕಲಾಗಿದೆ. ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಕ್ಕಳು ಕಂಡುಬಂದಿದ್ದಾರೆ. ಗಾಬರಿಗೊಂಡ ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಅಲ್ಲಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಮತ್ತೋರ್ವ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಬಾಲಕಿಯರ ಸಾವು!
ಕುಟುಂಬ ಸದಸ್ಯರ ಮಾಹಿತಿ ಪ್ರಕಾರ, ಮೂವರು ಬಾಲಕಿಯರು ಹದಿಹರೆಯದವರಾಗಿದ್ದು, ಅವರು ದುಪ್ಪಟ್ಟಾದಿಂದ ಕಟ್ಟಿಹಾಕಲಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಅಸೋಹಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದರಂತೆ.
ಮಾಹಿತಿಯ ಮೇರೆಗೆ ಉನ್ನಾವೋ ಪೊಲೀಸ್ ಅಧೀಕ್ಷಕ ಪೊಲೀಸ್ ತುಕಡಿಯೊಂದಿಗೆ ಬಾಬುರಾ ಗ್ರಾಮಕ್ಕೆ ಆಗಮಿಸಿ ಇಡೀ ಪ್ರದೇಶವನ್ನು ಪರಿಶೀಲಿಸಿದರು. ಸ್ಥಳದ ತಪಾಸಣೆ ಪೂರೈಸಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಉನ್ನಾವ್ ಆನಂದ್ ಕುಲಕರ್ಣಿ ಮಾಧ್ಯಮಗಳೊಂದಿಗೆ ಮಾತನಾಡಿ, ಹುಲ್ಲು ತರಲು ಹೋದ ಮೂವರು ಬಾಲಕಿಯರು ಹೊಲದಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಅವರ ಪೋಷಕರಿಗೆ ಸಿಕ್ಕಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದು, ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ ಅಂತಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.