ಚಿತ್ತೂರು (ಆಂಧ್ರ ಪ್ರದೇಶ) : ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಲಾರಿ ಡಿಕ್ಕಿ ಹೊಡೆದು ಮೂರು ಆನೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯ ಪಲಮನೇರು ಮಂಡಲದಲ್ಲಿ ಅವಘಡ ನಡೆದಿದೆ. ಮಾಹಿತಿ ಪ್ರಕಾರ, ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಟೊಮೆಟೊ ಸಾಗಿಸುತ್ತಿದ್ದ ಲಾರಿ ರಸ್ತೆ ದಾಟುತ್ತಿದ್ದ ಆನೆಗಳ ಹಿಂಡಿಗೆ ಗುದ್ದಿದೆ. ಪರಿಣಾಮ ಮೂರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಲಾರಿ ಚಾಲಕರ ಅತಿವೇಗದ ಚಾಲನೆಯಿಂದ ಅಪಘಾತ: ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಪಘಾತದ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ವಿದ್ಯುತ್ ಸ್ಪರ್ಶಿಸಿ ಆನೆಗಳು ಸಾವು: ಈ ಹಿಂದೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ರೈತರೊಬ್ಬರ ಹೊಲದ ಸುತ್ತ ಹಾಕಲಾಗಿದ್ದ ವಿದ್ಯುತ್ ಬೇಲಿ ತಗುಲಿ ಮೂರು ಆನೆಗಳು ಸಾವನ್ನಪ್ಪಿದ್ದವು. ಪಾಲಕೋಡ್ ಪ್ರದೇಶದಲ್ಲಿ ಘಟನೆ ನಡೆದಿತ್ತು. ಆನೆಗಳ ಸಾವಿಗೆ ಕಾರಣವಾದ ರೈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಎರಡು ಮರಿ ಆನೆಗಳು ಸೇರಿದಂತೆ ಐದು ಆನೆಗಳ ಹಿಂಡು ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿ ಬಳಿಯ ಕಲಿಕೌಂಡನ್ ಕೋಟೈ ಗ್ರಾಮದ ಮುರುಗೇಶನ್ ಎಂಬವರ ಬೆಳೆ ತಿನ್ನಲು ಮುಂಜಾನೆ ಬಂದಿದ್ದವು. ಮುರುಗೇಶನ್ ಹೊಲಕ್ಕೆ ಬೇಲಿ ಹಾಕಿ ಸಮೀಪದ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಆನೆಗಳು ಬೇಲಿಯಿಂದ ಗದ್ದೆಗೆ ನುಗ್ಗಲು ಯತ್ನಿಸಿದ್ದು ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿವೆ.
ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಆರು ಆನೆಗಳ ಪೈಕಿ ನಾಲ್ಕು ಆನೆಗಳು ವಿದ್ಯುತ್ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಭಾಮಿನಿ ತಾಲೂಕಿನ ಕತ್ರಗಡ-ಬಿ ಎಂಬಲ್ಲಿ ಗುರುವಾರ (13-2023) ರಾತ್ರಿ ನಡೆದಿತ್ತು. ಒಡಿಶಾದಿಂದ ಆರು ತಿಂಗಳ ಹಿಂದೆ ಆರು ಆನೆಗಳ ಹಿಂಡು ಈ ಪ್ರದೇಶಕ್ಕೆ ಬಂದಿದ್ದವು. ಕಾತ್ರಗಡ-ಬಿ, ಪಕ್ಕುಡಿಭದ್ರಾ ನಡುವಿನ ಗದ್ದೆಯಲ್ಲಿ ಸಂಚರಿಸುತ್ತಿದ್ದಾಗ ಆನೆ ಮರಿಯೊಂದಕ್ಕೆ ವಿದ್ಯುತ್ ತಗುಲಿ ಸಾವನ್ನಪ್ಪಿತ್ತು. ಮರಿ ಆನೆಯನ್ನು ಸ್ಪರ್ಶಿಸಿದ ಬಳಿಕ ಉಳಿದ ಮೂರು ಆನೆಗಳಿಗೂ ವಿದ್ಯುತ್ ಪ್ರವಹಿಸಿದ್ದು, ಅವುಗಳಊ ಸಹ ಮೃತಪಟ್ಟಿದ್ದವು.
ಇದನ್ನೂ ಓದಿ: ಆಂಧ್ರದಲ್ಲಿ ವಿದ್ಯುತ್ ಪ್ರವಹಿಸಿ ನಾಲ್ಕು ಆನೆಗಳ ದಾರುಣ ಸಾವು