ಆಗ್ರಾ (ಉತ್ತರ ಪ್ರದೇಶ): ನಕಲಿ ಮದ್ಯ ಸೇವಿಸಿ ಮೂವರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಕೌಲಾರಾ ಕಲಾ ಗ್ರಾಮ ಮತ್ತು ಆಗ್ರಾದ ಬಾರ್ಕುಲಾ ಗ್ರಾಮದ ಬಳಿಯ ನಾಲ್ಕು ಮದ್ಯದಂಗಡಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ಮೃತರನ್ನು ಕೌಲಾರ ಕಲಾ ಗ್ರಾಮದ ನಿವಾಸಿಗಳಾದ ರಾಧೀರ್(42) ಮತ್ತು ಅನಿಲ್ (34), ಬಾರ್ಕುಲಾ ಗ್ರಾಮದ ನಿವಾಸಿ ಗಯಾ ಪ್ರಸಾದ್ (50) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಮದ್ಯದಂಗಡಿಗಳಿಂದ ಮದ್ಯ ಖರೀದಿಸಿ ಸೇವಿಸಿದ್ದಾರೆ. ಬಳಿಕ ಇವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅಸ್ವಸ್ಥರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ, ಮೂವರು ಮೃತಪಟ್ಟಿದ್ದು, ರಾಮ್ ವೀರ್ ಎಂಬುವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಗ್ರಾ ಗ್ರಾಮಾಂತರ ಎಸ್ಪಿ ಅಶೋಕ್ ವೆಂಕಟ್, ರಾಧೀರ್, ಅನಿಲ್ ಮತ್ತು ಗಯಾ ಪ್ರಸಾದ್ ಮೃತಪಟ್ಟಿದ್ದಾರೆ. ರಾಮ್ವೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿಗೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕವೇ ಎಲ್ಲ ಮಾಹಿತಿ ತಿಳಿಯುತ್ತಿದೆ. ಎರಡು ಗ್ರಾಮಗಳಲ್ಲಿರುವ ನಾಲ್ಕು ಮದ್ಯದಂಗಡಿಗಳನ್ನು ಸೀಜ್ ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮಂಕುಬೂದಿ ಎರಚಿ 3 ಮದುವೆಯಾದ ಮಂತ್ರವಾದಿ 4ನೇಯವಳ ಜತೆ ಜೂಟ್.. ಹೆಣ್ಣು ಹೆತ್ತವರು ಸುಮ್ನೇ ಬಿಡ್ತಾರಾ..
ರಾಧೀರ್ ಕುಟುಂಬವು ಸೋಮವಾರ ತಡರಾತ್ರಿ ಪೊಲೀಸರ ಅನುಮತಿಯಿಲ್ಲದೇ, ಅವರ ಅಂತ್ಯಸಂಸ್ಕಾರ ನಡೆಸಿದೆ. ಉಳಿದ ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.