ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಸೈಬರಾಬಾದ್ ಪೊಲೀಸರು ಏಕಕಾಲಕ್ಕೆ ಮೂರು ಅಂತಾರಾಜ್ಯ ಕ್ರಿಕೆಟ್ ಬೆಟ್ಟಿಂಗ್ ಜಾಲಗಳನ್ನು ಬೇಧಿಸಿದ್ದಾರೆ. ಐಪಿಎಲ್ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಮೂರು ಗ್ಯಾಂಗ್‌ಗಳ ಏಳು ಜನರನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಅವರೊಂದಿಗೆ ಶಂಶಾಬಾದ್ ಮತ್ತು ರಾಜೇಂದ್ರನಗರ ಡಿಸಿಪಿಗಳಾದ ನಾರಾಯಣ ರೆಡ್ಡಿ, ಜಗದೀಶ್ವರರೆಡ್ಡಿ, ಎಸ್‌ಒಟಿ ಡಿಸಿಪಿ ರಶೀದ್, ಹೆಚ್ಚುವರಿ ಡಿಸಿಪಿಗಳಾದ ನಾರಾಯಣ, ಶೋಭನ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ 36 ಫೋನ್‌ಗಳು, ಮೂರು ಲ್ಯಾಪ್‌ಟಾಪ್‌ಗಳು, ಒಂದು ಟ್ಯಾಬ್ ಮತ್ತು ರೂಟರ್ ಜೊತೆಗೆ ನಗದು ಮತ್ತು ಬ್ಯಾಂಕ್ ಖಾತೆಗಳಲ್ಲಿನ 1.84 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಬಂಧಿತ ಆರೋಪಿಗಳ ವಿವರ: ಹೈದರಾಬಾದ್ನ ಎಸ್ಆರ್ ನಗರದಲ್ಲಿ ವಾಸವಾಗಿದ್ದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ರಿಯಲ್ ಎಸ್ಟೇಟ್ ವ್ಯಾಪಾರಿ ಪೊಡಪಾಟಿ ನರಸಿಂಗ ರಾವ್ ಬೆಟ್ಟಿಂಗ್ ಜಾಲ ನಡೆಸುತ್ತಿದ್ದ. ಬೆಂಗಳೂರಿನ ಗಣಪತಿ ರೆಡ್ಡಿ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶ್ರೀನಿವಾಸರಾಜು ಇತರ ಇಬ್ಬರು ಬುಕ್ಕಿಗಳಿಗೆ ಸಬ್ ಬುಕ್ಕಿಗಳಾಗಿ ಕೆಲಸ ಮಾಡಿದ್ದರು. ಇವರಿಬ್ಬರೂ ಬಳಸುತ್ತಿದ್ದ ಆರು ವಿಶೇಷ ಆ್ಯಪ್‌ಗಳನ್ನು ನರಸಿಂಗ್ ರಾವ್‌ಗೂ ಬಳಸಲು ಅವಕಾಶ ನೀಡಲಾಗಿತ್ತು.
ಈ ಮೂಲಕ ನರಸಿಂಗ್ ರಾವ್ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದ ಪಂಟರ್‌ಗಳಿಗೆ ಆ್ಯಪ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡುತ್ತಿದ್ದರು. ಫೋನ್ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ನಗದು ವಹಿವಾಟುಗಳನ್ನು ಮಾಡಲಾಗಿತ್ತು. ಈ ಬಗ್ಗೆ ಶಂಶಾಬಾದ್ ಎಸ್‌ಡಬ್ಲ್ಯೂಒಟಿ ಪೊಲೀಸರು ತಮಗೆ ಸಿಕ್ಕ ಮಾಹಿತಿ ಮೇರೆಗೆ ಕಾರ್ಯಾಚರಣೆ ನರಸಿಂಗ್ ರಾವ್ನನ್ನು ಬಂಧಿಸಿದ್ದಾರೆ. ಶ್ರೀನಿವಾಸ್ ಮತ್ತು ಗಣಪತಿ ರೆಡ್ಡಿ ತಲೆಮರೆಸಿಕೊಂಡಿದ್ದಾರೆ. ಇದೇ ವೇಳೆ ಆರೋಪಿಗಳಿಂದ 60 ಲಕ್ಷ ರೂಪಾಯಿ ನಗದು ಹಾಗೂ 32 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಐಷಾರಾಮಿ ಕಾರು: ವಿಡಿಯೋ
ಮತ್ತೊಂದೆಡೆ, ಆಂಧ್ರ ಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಪ್ರದೇಶದ ರವಿರಾಜು ಮತ್ತು ಭೂಪತಿರಾಜು ಪ್ರಸಾದ್ ರಾಜು ನಡೆಸುತ್ತಿದ್ದ ಬೆಟ್ಟಿಂಗ್ ಜಾಲವನ್ನೂ ಪತ್ತೆ ಹಚ್ಚಲಾಗಿದೆ. ಇಬ್ಬರೂ ಕೂಡ ಮೀನು ಕೊಳಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಐದು ವರ್ಷಗಳ ಹಿಂದೆ ಹೈದರಾಬಾದ್‌ಗೆ ಬಂದಿದ್ದ ಇಬ್ಬರೂ ಸಹ ತೆಲಂಗಾಣ ಮತ್ತು ಆಂಧ್ರದಲ್ಲಿ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು. ಈ ವಿಷಯ ತಿಳಿದ ರಾಜೇಂದ್ರನಗರ ಎಸ್‌ಡಬ್ಲ್ಯುಒಟಿ ಇನ್ಸ್‌ಪೆಕ್ಟರ್ ವೆಂಕಟ್ ರೆಡ್ಡಿ ನೇತೃತ್ವದ ತಂಡವು ಬಂಡ್ಲಗೂಡದಲ್ಲಿ ಭೂಪತಿರಾಜು ಮತ್ತು ರವಿರಾಜು ಅವರನ್ನು ಬಂಧಿಸಿದೆ. ಬಂಧಿತರಿಂದ 71.5 ಲಕ್ಷ ರೂ. ನಗದು ಹಾಗೂ 7.37 ಲಕ್ಷ ರೂಪಾಯಿ ಹಣ ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ವನಪರ್ತಿಯ ಕೆ.ವಿನೋದ್ ಕುಮಾರ್ (32) ಹಾಗೂ ಶ್ರೀಕಾಂತ್ ಎಂಬುವರನ್ನು ಬಂಧಿಸಲಾಗಿದೆ. ಹೈದರಾಬಾದ್ನ ನರಸಿಂಗಿ ತಂಗಿದ್ದ ಇಬ್ಬರೂ ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಇವರು ಭೀಮಾವರಂ ಪ್ರದೇಶದ ಲಿಂಗರಾಜ್ ಎಂಬಾತನ ಉಪ ಬುಕ್ಕಿಗಳಾಗಿದ್ದಾರೆ. ಮಾಹಿತಿ ಪಡೆದ ಬಾಲಾನಗರ ಎಸ್‌ಡಬ್ಲ್ಯುಒಟಿ ಇನ್ಸ್‌ಪೆಕ್ಟರ್ ರಾಹುಲ್ ನೇತೃತ್ವದ ನರಸಿಂಗಿ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, 7.52 ಲಕ್ಷ ರೂ. ನಗದು ಹಾಗೂ 17 ಫೋನ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಅಸ್ಸೋಂ ಸಿಲ್ಚಾರ್ ಜೈಲಿನಿಂದ ಇಬ್ಬರು ಕೈದಿಗಳು ಪರಾರಿ..!