ನವದೆಹಲಿ/ರಾಂಚಿ/ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎಲ್ಲ ಶಾಸಕರು ಹಣದ ಸಂಪೂರ್ಣ ವಿವರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರಾದ ಡಾ.ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ವಿಕ್ಸಲ್ ಕೊಂಗಾಡಿ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ರಾಣಿ ಹಾತ್‌ನಲ್ಲಿ ನೋಟುಗಳ ಚೀಲಗಳೊಂದಿಗೆ ಸಿಕ್ಕಿಬಿದ್ದಿದ್ದರು. ಈ ಶಾಸಕರು ತಮ್ಮ ಇಬ್ಬರು ಸಹಚರರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ಹಿಡಿದಿದ್ದರು. ಈ ನೋಟುಗಳನ್ನು ಎಣಿಕೆ ಮಾಡಿದಾಗ ಒಟ್ಟು 48 ಲಕ್ಷ ರೂ. ಪತ್ತೆಯಾಗಿತ್ತು.
ಅಂತೆಯೇ, ರಾತ್ರಿಯೇ ಪೊಲೀಸರು ಮೂವರು ಶಾಸಕರನ್ನು ಬಂಧಿಸಿದ್ದರು. ಇದೀಗ ಮೂವರು ಶಾಸಕರು ವಾಹನ ಖರೀದಿ ಉದ್ದೇಶಕ್ಕಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಅದೇ ಕಾರಣಕ್ಕಾಗಿ ಹಣವನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸರ್ಕಾರ ಒಂದಲ್ಲ ಒಂದು ವಿಷಯ ತಂದು ಸಂಸತ್ನಲ್ಲಿ ಗದ್ದಲ ಮಾಡ್ತಿದೆ: ಮಲ್ಲಿಕಾರ್ಜುನ ಖರ್ಗೆ
ಆದರೆ, ಈ ಹಣವನ್ನು ಕಾರು ಖರೀದಿಗಾಗಿಯೇ ಅಥವಾ ಇನ್ನಾವುದೇ ವಸ್ತು ಖರೀದಿಗಾಗಿಯೇ ಸಾಗಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೀಗ ಬಂದಿರುವ ಮಾಹಿತಿ ಪ್ರಕಾರ, ಮೂವರನ್ನೂ ಠಾಣೆಯಿಂದ ಬಿಡುಗಡೆ ಮಾಡಲಾಗಿದ್ದು, ಪಶ್ಚಿಮ ಬಂಗಾಳದಿಂದ ಜಾರ್ಖಂಡ್‌ಗೆ ತೆರಳಿದ್ದಾರೆ.
ಇತ್ತ, ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂವರು ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಅಲ್ಲದೇ, ರಾಜ್ಯ ಸರ್ಕಾರವನ್ನು ಉರುಳಿಸಲು ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ವಿಕ್ಸಲ್ ಕೊಂಗಾಡಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜೇಶ್ ಠಾಕೂರ್ ಹಾಗೂ ಶಾಸಕ ಅನೂಪ್ ಸಿಂಗ್ ರಾಂಚಿಯ ಅರ್ಗೋರಾ ಪೊಲೀಸ್ ಠಾಣೆಯಲ್ಲಿ ಮೂವರು ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದೇ ವೇಳೆ ಇದು ಬಿಜೆಪಿಯ ಆಪರೇಷನ್ ಕಮಲದ ಕುತಂತ್ರ ಎಂದೂ ಕಾಂಗ್ರೆಸ್ ದೂರಿದ್ದು, ಈ ಸಂಬಂಧ ರಾಜ್ಯ ಘಟಕದಿಂದ ವರದಿಯನ್ನು ಹೈಕಮಾಂಡ್ ಕೇಳಿದೆ.
ಇದನ್ನೂ ಓದಿ: ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರು ಅಮಾನತು