ನಾಗ್ಪುರ/ಬೆಳಗಾವಿ: ವಾರದ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 10 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಹಾಗೂ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದ ಕರ್ನಾಟದ ಬೆಳಗಾವಿಯ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಇಲಾಖೆಗೆ ಕಳೆದ ಮಂಗಳವಾರ ಬೆಳಗ್ಗೆ ಸತತ ಮೂರು ಬಾರಿ ಬೆದರಿಕೆ ಕರೆಗಳು ಬಂದಿದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರ ತಂಡ ಬೆಳಗಾವಿಗೆ ಬಂದು ಹಿಂಡಲಗಾ ಜೈಲಿನಲ್ಲಿ ತನಿಖೆ ನಡೆಸಿದ್ದರು. ಇದೀಗ ನಾಗ್ಪುರ ಪೊಲೀಸ್ ತಂಡ ಬೆಳಗಾವಿಗೆ ತೆರಳಿ ಜೈಲಿನಿದಲ್ಲಿದ್ದ ಆರೋಪಿ ಜಯೇಶ್ ಪೂಜಾರಿಯನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಆರೋಪಿ ಜಯೇಶ್ ಪೂಜಾರಿ ಇತರ ಕೆಲವು ಆರೋಪಗಳಿಗೆ ಸಂಬಂಧಿಸಿ ಶಿಕ್ಷೆಗೊಳಗಾಗಿ ಇಲ್ಲಿ ಜೈಲಿನಲ್ಲಿದ್ದನು.
ಕಳೆದ ವಾರ ಮಾರ್ಚ್ 21 ರಂದು ನಾಗ್ಪುರದ ಆರೆಂಜ್ ಸಿಟಿ ಆಸ್ಪತ್ರೆ ಬಳಿ ಇರುವ ನಿತಿನ್ ಗಡ್ಕರಿ ಕಚೇರಿಗೆ ಜಯೇಶ್ ಕಾಂತ ಅಲಿಯಾಸ್ ಜಯೇಶ್ ಪೂಜಾರಿ ಹೆಸರಿನಲ್ಲಿ ಮೂರು ಕರೆಗಳು ಬಂದಿದ್ದು, ಕರೆಯಲ್ಲಿ ಈತ ತನ್ನ ಹೆಸರು ಹೇಳಿಕೊಂಡಿದ್ದು, 10 ಕೋಟಿ ರೂ ಹಣಕ್ಕೆ ಬೇಡಿಕೆಯಿಡುವುದರ ಜೊತೆಗೆ ಹಣ ನೀಡುವಲ್ಲಿ ವಿಫಲವಾದಲ್ಲಿ ಪ್ರಾಣಕ್ಕೆ ಅಪಾಯ ಎನ್ನುವ ರೀತಿಯಲ್ಲಿ ಜೀವ ಬೆದರಿಕೆ ಹಾಕಿದ್ದನು.
ಈ ಹಿನ್ನೆಲೆ ಪ್ರಕರಣದ ಮರುದಿನವೇ ನಾಗ್ಪುರ ಪೊಲೀಸರು ಬೆಳಗಾವಿಗೆ ಆಗಮಿಸಿ ಹಿಂಡಲಗಾ ಜೈಲಿನಲ್ಲಿರುವ ಜಯೇಶ್ ಪೂಜಾರಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಕೈದಿಯಿಂದ ಎರಡು ಮೊಬೈಲ್ ಫೋನ್ಗಳು ಹಾಗೂ ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆದಿದ್ದರು. ಗಡ್ಕರಿಗೆ ಬೆದರಿಕೆ ಹಾಕಲು ಇವುಗಳನ್ನೇ ಬಳಸಲಾಗಿತ್ತು ಎಂದು ವರದಿಯಾಗಿತ್ತು. ಸಾಕ್ಷ್ಯ ದೃಷ್ಟಿಯಿಂದ ಇದು ಮಹತ್ವದ ಬೆಳವಣಿಗೆ ಆಗಿದ್ದರಿಂದ ಆರೋಪಿಯನ್ನು ಹೆಚ್ಚಿನ ತನಿಖೆಗೆ ನಾಗ್ಪುರಕ್ಕೆ ಸ್ಥಳಾಂತರ ಮಾಡುವ ಕುರಿತು ನಿರ್ಧರಿಸಲಾಗಿತ್ತು. ಆ ಹಿನ್ನೆಲೆ ಸದ್ಯ ಆರೋಪಿಯನ್ನು ಹೆಚ್ಚಿನ ತನಿಖೆಗಾಗಿ ನಾಗ್ಪುರಕ್ಕೆ ಕರೆತರಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿಗೆ ಬಂದ ಕರೆಗಳನ್ನು ಪೊಲೀಸರು ಟ್ರೇಸ್ ಮಾಡಿದಾಗ, ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಮಂಗಳೂರು ಮೂಲದ ಮಹಿಳೆಯೊಬ್ಬರಿಗೆ ಕನೆಕ್ಟ್ ಆಗಿದೆ. ಆ ಮಹಿಳೆಯನ್ನೂ ಕೂಡ ಈ ಪ್ರಕರಣದಲ್ಲಿ ತನಿಖೆ ಮಾಡಲಾಗಿದೆ. ಜಯೇಶ್ ಕಾಂತ ಕುಖ್ಯಾತ ದರೋಡೆಕೋರನಾಗಿದ್ದು, 2016 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಈತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಈ ಹಿಂದೆಯೂ ಅಂದರೆ ಜನವರಿ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಇದೇ ರೀತಿ ಹಣಕ್ಕೆ ಬೇಡಿಕೆ ಹಾಗೂ ಜೀವ ಬೆದರಿಕೆಯೊಡ್ಡಿ ಮೂರು ಕರೆಗಳು ಬಂದಿದ್ದವು. ತಲೆಮರೆಸಿಕೊಮಡಿರುವ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಕಸ್ಕರ್‌ನ ಹಿಂಬಾಲಕ ಎಂದು ಹೇಳಿಕೊಂಡು ಜಯೇಶ್ ಪೂಜಾರಿ ಗಡ್ಕರಿ ಕಚೇರಿಗೆ ಕರೆ ಮಾಡಿ 100 ಕೋಟಿ ರೂಪಾಯಿ ನೀಡುವಂತೆ ಇಲ್ಲವಾದಲ್ಲಿ ಜೀವಕ್ಕೆ ಹಾನಿಯುಂಟು ಮಾಡುವ ಬೆದರಿಕೆ ಒಡ್ಡಿದ್ದನು. ಆ ಪ್ರಕರಣದ ತನಿಖೆ ವೇಳೆ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ಬಳಿ ಅನೇಕ ವಿಐಪಿಗಳ ಫೋನ್ ನಂಬರ್ಗಳಿದ್ದ ಡೈರಿ ಸಿಕ್ಕಿತ್ತು.
ಇದನ್ನೂ ಓದಿ: ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ: ಬೆಳಗಾವಿಗೆ ಭೇಟಿ ನೀಡಿದ ನಾಗ್ಪುರ ಪೊಲೀಸರ ತಂಡ