ನವ ದೆಹಲಿ: ಇಂದಿನಿಂದ ಆರಂಭವಾಗಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ನಿರೀಕ್ಷೆಯಂತೆ ಮೊದಲ ದಿನವೇ ಆಡಳಿತರೂಢ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸಂಸದರು ಸದನದಲ್ಲಿ ಕೋಲಾಹಲ ಎಬ್ಬಿಸಿದರು.
ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದ ಸಚಿವರು ಹಾಗೂ ಮಂತ್ರಿ ಪರಿಷತ್ ಸದಸ್ಯರನ್ನಾಗಿ ಸಂಸತ್‌ಗೆ ಪರಿಚಯಿಸುತ್ತಿದ್ದಂತೆ ಪ್ರತಿಪಕ್ಷದವರು ಘೋಷಣೆಗಳನ್ನು ಕೂಗಲಾರಂಭಿಸಿದರು. ನಿರಂತರವಾಗಿ ಗದ್ದಲ ಮುಂದುವರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಕೇಂದ್ರ ಸಚಿವ ಸಂಪುಟಕ್ಕೆ ಸೇರಿದ್ದಾರೆ. ಕೃಷಿ ಮತ್ತು ಗ್ರಾಮೀಣ ಭಾಗದವರು, ಒಬಿಸಿ ಸಮುದಾಯದವರೂ ಆದ ನನ್ನ ಸಹೋದ್ಯೋಗಿಗಳನ್ನು ಮಂತ್ರಿ ಪರಿಷತ್‌ಗೆ ಸೇರಿಸಿಕೊಳ್ಳಲಾಗಿದೆ. ದೇಶದ ಮಹಿಳೆಯರು, ಒಬಿಸಿಗಳು, ರೈತರ ಮಕ್ಕಳು ಸಚಿವರಾಗಿರುವುದಕ್ಕೆ ಬಹುಶಃ ಕೆಲವರು ಅಸಂತೋಷಗೊಂಡಿದ್ದಾರೆ. ಹೀಗಾಗಿ ಅವರನ್ನು ಸಂಸತ್‌ಗೆ ಪರಿಚಯಿಸಲು ಬಿಡುತ್ತಿಲ್ಲ ಎಂದು ಮಾತಿನಲ್ಲೇ ತಿವಿದರು.
ಇದನ್ನೂ ಓದಿ: ಅರ್ಥಪೂರ್ಣ ಚರ್ಚೆ ಮಾಡಿ ಎಂದ ನಮೋ.. ಆರಂಭದಲ್ಲೇ ವಿಪಕ್ಷಗಳ ಕೋಲಾಹಲ: ಕಲಾಪ ಮುಂದೂಡಿಕೆ
ಪ್ರತಿಪಕ್ಷಗಳು ಸೃಷ್ಟಿಸಿದ ಗದ್ದಲದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷದ ವರ್ತನೆ ದುರಾದೃಷ್ಟಕರ ಮತ್ತು ಅನಾರೋಗ್ಯಕರವಾಗಿದೆ ಎಂದು ಹೇಳಿದರು. ತಮ್ಮ 24 ವರ್ಷಗಳ ಅನುಭವದಲ್ಲಿ ಸಂಸತ್ತಿನಲ್ಲಿ ಮಂತ್ರಿಗಳನ್ನು ಪರಿಚಯಿಸಲು ಪ್ರಧಾನಮಂತ್ರಿಗೆ ಅನುಮತಿ ನೀಡದಿರುವುದನ್ನು ತಾವು ನೋಡಿಲ್ಲ ಎಂದು ಸಿಂಗ್ ಹೇಳಿದರು. ಅಧಿವೇಶನದಲ್ಲಿ ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಆಗಸ್ಟ್ 13 ರವರೆಗೆ ಸಂಸತ್ತಿನ ಅಧಿವೇಶನ ಮುಂದುವರಿಯಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುವುದು. ಕೋವಿಡ್ -19 ಸಾಂಕ್ರಾಮಿಕ ನಿರ್ವಹಣೆ ಮತ್ತು ಇತರ ವಿಷಯಗಳ ಬಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ವಿರೋಧಿಸಲು ಪ್ರತಿಪಕ್ಷಗಳು ಸಜ್ಜಾಗಿವೆ ಎನ್ನಲಾಗ್ತಿದೆ.