ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸಲು ತಂತ್ರಗಾರಿಕೆಯಲ್ಲಿ ನಿರತವಾಗಿರುವ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟವನ್ನು 'I.N.D.I.A.' ಎಂದು ಕರೆದುಕೊಂಡಿವೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಗೆ 26 ಪಕ್ಷಗಳು ಭಾಗಿಯಾಗಿದ್ದವು. ಈ ಸಭೆಯಲ್ಲಿ ಹೊಸ ಮೈತ್ರಿಗೆ 'I.N.D.I.A' ಹೆಸರನ್ನು ಅಂತಿಮಗೊಳಿಸಲಾಗಿದೆ.
ಆದರೆ ಸಭೆ ನಡೆದು ಒಂದು ದಿನದ ನಂತರ, ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹರಡಿತ್ತು. ವರದಿಗಳನ್ನು ಕಾಂಗ್ರೆಸ್ ಬುಧವಾರ ತಳ್ಳಿಹಾಕಿದೆ ಮತ್ತು ಟೀಮ್ ಇಂಡಿಯಾ ಒಗ್ಗೂಡಿದೆ ಎಂದು ಹೇಳಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಪ್ರಧಾನಿ ಮೋದಿ ಎಷ್ಟೇ ಪ್ರಯತ್ನಿಸಿದರೂ ಪ್ರತಿಪಕ್ಷಗಳ ಮೈತ್ರಿ ಒಗ್ಗಟ್ಟಾಗಿಯೇ ಇರುತ್ತದೆ ಎಂದು ಹೇಳಿದೆ.
ಜೆಡಿಯು ನಾಯಕ ನಿತೀಶ್ ಕುಮಾರ್ ಹೊಸ ಮೈತ್ರಿ ಹೆಸರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ "ನಾವೆಲ್ಲರೂ ಒಂದೇ. ಟೀಮ್ ಇಂಡಿಯಾದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಘೋಷಣೆ 'ಜೀತೇಗ ಭಾರತ್' (ಭಾರತ ಗೆಲ್ಲುತ್ತದೆ). ಟೀಮ್ ಇಂಡಿಯಾವನ್ನು ಪ್ರಶ್ನಿಸುವವರು ಭಾರತವನ್ನು ಪದಗಳ ಮೂಲಕ ವಿಭಜಿಸಲು ಬಯಸುತ್ತಾರೆ" ಎಂದು ತಿರುಗೇಟು ನೀಡಿದರು. "ಬಿಜೆಪಿ ನಿತೀಶ್ ವಿರುದ್ಧ ಅಸಭ್ಯ ಭಾಷೆ ಬಳಸುತ್ತಿದೆ. ಈಗ ಅವರ ಬಗ್ಗೆ ವದಂತಿಗಳನ್ನು ಹರಡುತ್ತಿದ್ದಾರೆ. ಮೋದಿ ಎಷ್ಟೇ ಪ್ರಯತ್ನಿಸಿದರೂ ಟೀಮ್ ಇಂಡಿಯಾದಲ್ಲಿ ಯಾವುದೇ ಬಿರುಕುಗಳಿಲ್ಲ. ಬಿಜೆಪಿ ತನ್ನ ಪಿತೂರಿ ಸಿದ್ಧಾಂತಗಳೊಂದಿಗೆ ಮುಂದುವರಿಯಬಹುದು" ಎಂದು ಅವರು ಹೇಳಿದರು.
9 ವರ್ಷಗಳಲ್ಲಿ ಈ ಎನ್‌ಡಿಎ ಎಲ್ಲಿತ್ತು?: "ಪ್ರತಿಪಕ್ಷಗಳು ಒಗ್ಗೂಡುವ ಭೀತಿಯಿಂದ ಜು.18 ರಂದು ಎನ್‌ಡಿಎ ಸಭೆ ನಡೆಸಲಾಗಿದೆ. ನಾನು ಕೇಳಲು ಬಯಸುತ್ತೇನೆ, ಕಳೆದ 9 ವರ್ಷಗಳಲ್ಲಿ ಈ ಎನ್‌ಡಿಎ ಎಲ್ಲಿತ್ತು? ಮೊದಲಿಗೆ ಒಬ್ಬರು ಸಾಕು ಎಂದು ಹೇಳುತ್ತಿದ್ದರು. ಏಕಾಏಕಿ ಗಾಬರಿಗೊಂಡು ಎನ್‌ಡಿಎ ಬಗ್ಗೆ ಮಾತನಾಡತೊಡಗಿದರು. ಇದ್ದಕ್ಕಿದ್ದಂತೆ ಅವರು 38 ಪಕ್ಷಗಳನ್ನು ಸೇರಿಸಿದರು. ಅವರಲ್ಲಿ ಹಲವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿಲ್ಲ. ಕೇವಲ 12 ಪಕ್ಷಗಳು ಸಂಸದರನ್ನು ಹೊಂದಿದ್ದು, ಎರಡು ಪಕ್ಷಗಳು ಮಾತ್ರ 2 ಕ್ಕಿಂತ ಹೆಚ್ಚು ಸಂಸದರನ್ನು ಹೊಂದಿವೆ. ಇದು ಕೇವಲ ಪಕ್ಷ ಸ್ಥಾಪಿಸಿ ಎನ್‌ಡಿಎ ಸೇರುವಂತೆ ಜನರಿಗೆ ಮುಕ್ತ ಆಹ್ವಾನ ನೀಡಿದಂತಿದೆ" ಎಂದು ಸುರ್ಜೇವಾಲಾ ಕುಟುಕಿದರು.
ಹೊಸ ಮೈತ್ರಿಯ ಹೆಸರು ಇಂಡಿಯಾವನ್ನು ಪ್ರಶ್ನಿಸಿದ್ದಕ್ಕಾಗಿ ಮತ್ತು ವಿರೋಧ ಪಕ್ಷಗಳ ಮೇಲೆ ವಸಾಹತುಶಾಹಿ ಪ್ರಭಾವವನ್ನು ತೋರಿಸಿದೆ ಎಂದು ಕಾಂಗ್ರೆಸ್ ನಾಯಕ ಸುರ್ಜೇವಾಲಾ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಟೀಕಿಸಿದರು. "ಹಿಮಂತ ಬಿಸ್ವಾ ಶರ್ಮಾ ರಾಜನಿಗಿಂತ ಹೆಚ್ಚು ನಿಷ್ಠರಾಗಿರಲು ಪ್ರಯತ್ನಿಸುತ್ತಿದ್ದಾರೆ. ಅವರು ಸುಮಾರು 30 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದರು. ನಂತರ ಅವರು ಪಕ್ಷವನ್ನು ತೊರೆದರು. ಈಗ ಅವರು ಬಿಜೆಪಿಗೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಬೇಕಾಗಿದೆ ಎಂದು ಸುರ್ಜೇವಾಲಾ ತಿರುಗೇಟು ನೀಡಿದರು.
ಈ ಮೈತ್ರಿ ಅಧಿಕಾರಕ್ಕಾಗಿ ಅಲ್ಲ: ಹೊಸ ಮೈತ್ರಿಯಲ್ಲಿ ಕೆಲವು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರುತ್ತವೆ. ಈ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ನಾವು ದೇಶಕ್ಕಾಗಿ ರಚನಾತ್ಮಕ ಕಾರ್ಯಸೂಚಿಯನ್ನು ಮುಂದಕ್ಕೆ ತಂದಿದ್ದೇವೆ ಎಂದು ಸುರ್ಜೆವಾಲಾ ಸ್ಪಷ್ಟಪಡಿಸಿದರು.
ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕರು ಟಿಎಂಸಿ ಹೊಸ ಗುಂಪಿನ ಭಾಗವಾಗಿರುವುದರ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಹೋರಾಡುತ್ತದೆ ಮತ್ತು ಯಾವುದೇ ಪಕ್ಷದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಬಿಎಸ್‌ಪಿ ನಾಯಕಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ. ಅವರ ನೀತಿಗಳನ್ನು ಆತ್ಮಾವಲೋಕನ ಮತ್ತು ವಿಮರ್ಶೆ ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಅವರು ಟೀಮ್ ಇಂಡಿಯಾದ ಭಾಗವಲ್ಲ. ಆದರೆ ಅವರು ದೇಶದ ಅತ್ಯಂತ ಹಿರಿಯ ನಾಯಕಿ. ಅವರು ಹೇಳಿದ್ದಕ್ಕೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಆದರೆ, ಅವರ ನೀತಿಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಪರಿಶೀಲಿಸುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ ಎಂದು ಸುರ್ಜೆವಾಲಾ ಹೇಳಿದರು.
ವಿರೋಧ ಪಕ್ಷಗಳು ಚುನಾವಣೆ ಗೆಲ್ಲಲು ದೇಶದ ಹೆಸರನ್ನು ಬಳಸಲು ಬಯಸುತ್ತಿವೆ ಎಂದು ಇತ್ತೀಚೆಗೆ ವಕೀಲರೊಬ್ಬರು ಚುನಾವಣಾ ಸಮಿತಿಗೆ ಬರೆದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ ಅದನ್ನು(ಪತ್ರವನ್ನು) ನಿರ್ಲಕ್ಷಿಸಬೇಕು. ಇದು ಬಿಜೆಪಿಯ ಮತ್ತೊಂದು ಅಪಪ್ರಚಾರ. ಇದನ್ನು ನಿರ್ಲಕ್ಷಿಸುವುದು ಉತ್ತಮ ಎಂದು ಅವರು ಹೇಳಿದರು.
ಇದನ್ನೂ ಓದಿ: 26 ಪ್ರತಿಪಕ್ಷಗಳ 'ಇಂಡಿಯಾ'ದ ಸಭೆಯಲ್ಲಿ ಮಾಡಿದ ದೃಢ ಸಂಕಲ್ಪವೇನು..?