ಬೆಂಗಳೂರು: 'ಒಂದು ಮೊಟ್ಟೆಯ ಬೆಲೆ ಎಷ್ಟು?' - ಐದು, ಹತ್ತು.. ಇನ್ನೂ ದೊಡ್ಡದಾದರೆ ಇಪ್ಪತ್ತು ರೂಪಾಯಿ. ಅಷ್ಟೇ! ಆದರೆ, ಇಲ್ಲೊಂದು ಕೋಳಿ ಮೊಟ್ಟೆಯ ಬೆಲೆ ಹತ್ತಾರು ಅಥವಾ ನೂರಲ್ಲ, ಆದರೆ ಸಾವಿರಾರು ರೂಪಾಯಿ. ಏನಿದೆಲ್ಲ ಎಂದು ಕೇಳುವಿರಾ? ನಂಬಿಕೆಯಾಗುತ್ತಿಲ್ಲವೆ? ಹಾಗಾದರೆ ಮುಂದೆ ಓದಿ. ರೋಚಕ ಸಂಗತಿಯನ್ನು ತಿಳಿದುಕೊಳ್ಳಿ.
ಯುನೈಟೆಡ್ ಕಿಂಗ್ಡಮ್ನ ಅನಾಬೆಲ್ ಎಂಬ ಮಹಿಳೆ ಬೀದಿಗಳಲ್ಲಿ ತಿರುಗಾಡುವ ಕೋಳಿಗಳನ್ನು ನೋಡಿಕೊಳ್ಳುತ್ತಾರೆ. ಹಲವು ವರ್ಷಗಳಿಂದ ಆಕೆ ಅದೇ ಕೆಲಸ ಮಾಡುತ್ತಿದ್ದಾಳೆ. ಕೆಲವು ವರ್ಷಗಳ ಹಿಂದೆ ಅವಳ ಬಳಿಗೆ ಬಂದ ಕೋಳಿಯೊಂದು ಇತ್ತೀಚೆಗೆ ಮೊಟ್ಟೆಯಿಟ್ಟಿತು. ಕೋಳಿಗಳು ಮೊಟ್ಟೆ ಇಟ್ಟು ಮರಿ ಮಾಡುವುದು ಸಹಜ ಅಂತೀರಲ್ವಾ..! ಆದರೆ, ಈ ಮೊಟ್ಟೆಯು ಎಲ್ಲ ಮೊಟ್ಟೆಗಳಂತೆ ಅಂಡಾಕಾರವಾಗಿರಲಿಲ್ಲ. ಬದಲಾಗಿ ಇದು ದುಂಡಗಾಗಿತ್ತು.
ಗೂಗಲ್ ಮಾಡಿದಾಗ ತಿಳಿದಿತ್ತು ಮೊಟ್ಟೆಯ ವೈಶಿಷ್ಟ್ಯತೆ!: ಟ್ವಿನ್ಸ್ಕಿ ಎಂದು ಪ್ರೀತಿಯಿಂದ ಕರೆಯುವ ಕೋಳಿ ಇಟ್ಟಿದ್ದ ದುಂಡಗಿನ ಮೊಟ್ಟೆಯನ್ನು ನೋಡಿದಾಗ ಅನಾಬೆಲ್ ಮೊದಲಿಗೆ ಆಶ್ಚರ್ಯಚಕಿತರಾದರು. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗೂಗಲ್ ನಲ್ಲಿ ಹುಡುಕತೊಡಗಿದರು. ಆ ದುಂಡಗಿನ ಮೊಟ್ಟೆಯು 'ಕೋಟಿಯಲ್ಲಿ ಒಂದು' ಮೊಟ್ಟೆಯಾಗಿರುವುದು ಗೂಗಲ್ ಮೂಲಕ ಅವರಿಗೆ ತಿಳಿದು ಬಂದಿತು. ಅಂದರೆ ಪ್ರತಿ ನೂರು ಕೋಟಿ ಮೊಟ್ಟೆಗಳಲ್ಲಿ ಹೀಗೆ ದುಂಡಗಿರುವ ಒಂದೇ ಒಂದು ಮೊಟ್ಟೆ ಉತ್ಪತ್ತಿಯಾಗುತ್ತದಂತೆ. ಇದನ್ನು ತಿಳಿದ ಮಹಿಳೆಗೆ ಸಿಕ್ಕಾಪಟ್ಟೆ ಖುಷಿಯಾಯಿತು. ಆ ದುಂಡಗಿನ ಮೊಟ್ಟೆಯನ್ನು ತಿನ್ನಲು ಬಯಸದ ಅವಳು ಅದನ್ನು ಆನ್‌ಲೈನ್ ಮೂಲಕ ಹರಾಜಿಗೆ ಇಟ್ಟಳು. ಹರಾಜಿನಲ್ಲಿ ಇದರ ಬೆಲೆಯನ್ನು 48 ಸಾವಿರ ರೂಪಾಯಿ ಎಂದು ಘೋಷಿಸಲಾಗಿದೆ.
ಸಮಾಜ ಸೇವೆಗಾಗಿ ಹಣ ಬಳಕೆ: ಆ ಮೊಟ್ಟೆಯನ್ನು ಹರಾಜಿನಲ್ಲಿ ಪಡೆಯಲು ಅನೇಕರು ಆಸಕ್ತಿ ಹೊಂದಿದ್ದಾರೆ ಎಂದು ಅನಾಬೆಲ್ ಹೇಳುತ್ತಾರೆ. ಕೆಲವರು ಘೋಷಿಸಿದ ಬೆಲೆಗಿಂತ ಹೆಚ್ಚಿನ ಬೆಲೆ ನೀಡಲು ತಯಾರಾಗಿದ್ದಾರೆ. ಮೊಟ್ಟೆಯ ಹರಾಜಿನಿಂದ ಬಂದ ಹಣವನ್ನು ಸಮಾಜ ಸೇವಾ ಕಾರ್ಯಗಳಿಗೆ ಖರ್ಚು ಮಾಡುವುದಾಗಿ ಅನಾಬೆಲ್ ಹೇಳುತ್ತಾರೆ. ಆ ಹಣದಿಂದ ರಸ್ತೆಗಳಲ್ಲಿ ಓಡಾಡುವ ಪ್ರಾಣಿಗಳು ಮತ್ತು ಜೀವಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಈ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಾಯಿಯ ಸ್ಫೂರ್ತಿಯಿಂದ ವಿವಿಧ ರೀತಿಯ ಪಕ್ಷಿಗಳು ಮತ್ತು ಜೀವಿಗಳನ್ನು ಸಾಕುತ್ತಿದ್ದಾರೆ.
ಇಂತಹ ದುಂಡಗಿನ ಮೊಟ್ಟೆಯನ್ನು ಹೆಚ್ಚು ಜನ ನೋಡಿಲ್ಲ. ನಮ್ಮ ಮನೆಯ ಕೋಳಿ ಇಟ್ಟ ಮೊಟ್ಟೆಯು ಚೆಂಡಿನಂತೆ ಉರುಳುತ್ತದೆ. ನನ್ನ ಬಳಿ ಇರುವ ಎಲ್ಲ ಕೋಳಿಗಳು ನನ್ನೊಂದಿಗೆ ತುಂಬಾ ಸ್ನೇಹಪರವಾಗಿವೆ. ಆದರೆ ಟ್ವಿನ್ಸ್ಕಿ ಮಾತ್ರ ನನ್ನ ಸುತ್ತ ಸುತ್ತುತ್ತಿರುತ್ತದೆ. ಅದಕ್ಕಾಗಿಯೇ ಇದನ್ನು ನಾನು ಕೆಲವೊಮ್ಮೆ 'ಲ್ಯಾಬ್ರಡಾರ್' ನಾಯಿ ಎಂದೂ ಕರೆಯುತ್ತೇನೆ ಎನ್ನುತ್ತಾರೆ ಅನಾಬೆಲ್.
ಇದನ್ನು ಓದಿ:ಹೊಸ ಇತಿಹಾಸ: ಆಂಧ್ರದಲ್ಲಿ 2.47 ಲಕ್ಷ ವರ್ಷ ಹಳೆಯ ಶಿಲಾಯುಗ ಉಪಕರಣ ಪತ್ತೆ, ವಿಶ್ವದಲ್ಲಿ ಸಂಚಲನ