ಪಾಟ್ನಾ(ಬಿಹಾರ): ಅಗ್ನಿಪಥ ಯೋಜನೆ ವಿರೋಧಿಸಿ ಇಂದು 3ನೇ ದಿನವೂ ವಿದ್ಯಾರ್ಥಿಗಳು ಬಿಹಾರದ ಬಕ್ಸರ್‌ನಲ್ಲಿ ರೈಲು ಹಳಿ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ರಸ್ತೆ ಜಾಮ್ ಆಗಿದ್ದು, ದೆಹಲಿ - ಕೋಲ್ಕತ್ತಾ ರೈಲುಗಳು ಗಂಟೆಗಳ ಕಾಲ ನಿಂತಿದ್ದವು. ಸೇನಾ ನೇಮಕಾತಿಯ ಹೊಸ ನಿಯಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಬೆಳಗ್ಗೆ 5 ಗಂಟೆಯಿಂದಲೇ ರೈಲ್ವೆ ಹಳಿ ಮೇಲೆ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮೂರು ಬೋಗಿಗಳಿಗೆ ಬೆಂಕಿ: ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳಿಗೆ ಲಖಿಸರಾಯ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬೆಂಕಿ ಹಚ್ಚಿದರು. ಪತ್ರಕರ್ತರನ್ನು ವಿಡಿಯೋ ಮಾಡದಂತೆ ತಡೆಯಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ರೈಲ್ವೆ ಹಳಿ ಮೇಲೆ ಬೆಂಕಿ ಹಚ್ಚಲಾಗಿದೆ. ಅಲ್ಲದೇ, ಹಾಜಿಪುರ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಲಿಯಾದಲ್ಲಿ ಪ್ರತಿಭಟನೆ: ಉತ್ತರ ಪ್ರದೇಶದ ಬಲಿಯಾದಲ್ಲಿ ಯುವಕರು ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಭಟನಾಕಾರರು ನಗರದ ಹಲವು ಅಂಗಡಿಗಳ ನುಗ್ಗಿ ವಸ್ತುಗಳನ್ನು ನಾಶಪಡಿಸಿದರು. ಗಲಾಟೆ ಸೃಷ್ಟಿಸುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಪ್ರತಿಭಟನಾಕಾರರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ಕರನ್ ನಾಯರ್ ಹೇಳಿದ್ದಾರೆ.
ತೆಲಂಗಾಣದಲ್ಲೂ ಅಗ್ನಿವೀರ್ಗೆ ವಿರೋಧ್- ಸಿಕಿಂದರಾಬಾದ್ನಲ್ಲಿ ರೈಲಿಗೆ ಬೆಂಕಿ: ಪ್ರತಿಭಟನೆಯ ಅಗ್ನಿ ಈಗ ಹೈದರಾಬಾದ್‌ಗೂ ತಟ್ಟಿದೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಯುವಕರು ರೈಲಿಗೆ ಬೆಂಕಿ ಹಚ್ಚಿ ಧರಣಿ ಮುನ್ನಡೆಸುತ್ತಿದ್ದಾರೆ. ರೈಲ್ವೆ ಹಳಿಗಳ ಮೇಲೆ ಪಾರ್ಸೆಲ್ ಲಗೇಜ್ ಸುಟ್ಟು ಪ್ರತಿಭಟಿಸಿದರು. ಕೇಂದ್ರ ಸರ್ಕಾರ ತಕ್ಷಣವೇ ಈ ಹೊಸ ಸೇನಾ ಯೋಜನೆಯನ್ನು ಹಿಂತೆಗೆದುಕೊಂಡು ಮೊದಲಿನ ರೀತಿಯಲ್ಲೇ ಸೇನಾ ನೇಮಕಾತಿ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ದೆಹಲಿ-ಕೋಲ್ಕತ್ತಾ ರೈಲು ಮುಖ್ಯರಸ್ತೆ ಜಾಮ್: ಅಗ್ನಿಪಥ ಯೋಜನೆ ವಿರೋಧಿಸಿ ಬಕ್ಸರ್‌ನ ಡುಮ್ರಾನ್ ರೈಲು ನಿಲ್ದಾಣದ ಟ್ರ್ಯಾಕ್‌ಗೆ ಇಳಿದ ಸಾವಿರಾರು ವಿದ್ಯಾರ್ಥಿಗಳು ದೆಹಲಿ - ಕೋಲ್ಕತ್ತಾ ಮುಖ್ಯ ರೈಲು ಮಾರ್ಗವನ್ನು ಸಂಪೂರ್ಣವಾಗಿ ತಡೆದಿದ್ದಾರೆ.
4 ವರ್ಷದ ಅಗ್ನಿಪಥ ಯೋಜನೆಯ ಘೋಷಣೆ ಸರಿಯಲ್ಲ: ರಾಜಕೀಯ ನಾಯಕರಿಗೆ 5 ಅಧಿಕಾರದ ಅವಧಿಯಿದೆ. ಆದರೆ, 4 ವರ್ಷಗಳಲ್ಲಿ ನಮಗೆ ಏನಾಗುತ್ತದೆ?, ಪಿಂಚಣಿ ಸೌಲಭ್ಯವೂ ಇಲ್ಲ. 4 ವರ್ಷಗಳ ನಂತರ ನಾವು ಬೀದಿಗೆ ಬರುತ್ತೇವೆ. ನಾಲ್ಕು ವರ್ಷ ಪೂರ್ಣಗೊಂಡ ಬಳಿಕ ಶೇ.25ರಷ್ಟು ಅಗ್ನಿವೀರರನ್ನು ಕಾಯಂ ಕೇಡರ್ ಗೆ ಸೇರಿಸಿಕೊಂಡರೂ ಉಳಿದ ಶೇ, 75 ರಷ್ಟು ಮಂದಿ ಏನು ಮಾಡಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ನೇಮಕಾತಿ ಘೋಷಿಸಿದ್ದ ರಾಜನಾಥ್ ಸಿಂಗ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಗ್ನಿಪಥ ಯೋಜನೆಯನ್ನು ಘೋಷಿಸಿದ ಮರುದಿನವೇ ಬುಧವಾರದಿಂದ ಪ್ರತಿಭಟನೆ ಪ್ರಾರಂಭವಾಯಿತು ಮತ್ತು ಇಂದು ಮೂರನೇ ದಿನವೂ ಅನೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ರೈಲು ಹಳಿ ತಡೆದು ಪ್ರತಿಭಟನೆ ನಡೆಸಿದರು.
ಜೂನ್ 14 ರಂದು, ಕೇಂದ್ರ ಸರ್ಕಾರವು ಸೇನೆಯ, ನೌಕಾಪಡೆ ಮತ್ತು ವಾಯುಪಡೆಯ ಮೂರು ಶಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರನ್ನು ನೇಮಿಸಿಕೊಳ್ಳಲು ಅಗ್ನಿಪಥ ನೇಮಕಾತಿ ಯೋಜನೆಯನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ ಯುವಕರು ಕೇವಲ 4 ವರ್ಷಗಳ ಕಾಲ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ. ವೇತನ ಮತ್ತು ಪಿಂಚಣಿ ಬಜೆಟ್ ಕಡಿತಗೊಳಿಸಲು ಸರ್ಕಾರ ಈ ಕ್ರಮಕೈಗೊಂಡಿದೆ.
ಪುರುಷ - ಮಹಿಳೆಯರಿಬ್ಬರಿಗೂ ನೇಮಕಾತಿ: ಅಗ್ನಿಪಥ ಯೋಜನೆಯಡಿ ಪುರುಷ - ಮಹಿಳೆಯರಿಬ್ಬರಿಗೂ ಅಗ್ನಿವೀರರಾಗಲು ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ. ಹದಿನೇಳೂವರೆ ವರ್ಷದಿಂದ 22 ವರ್ಷದೊಳಗಿನವರು ಅಗ್ನಿ ಪಥ ಯೋಜನೆಯಡಿ ಸೇನೆ ಸೇರಬಹುದು. ಕನಿಷ್ಠ 10ನೇ ತರಗತಿ ಪಾಸಾಗಿದ್ದರೂ ಸೇನೆಗೆ ಸೇರಲು ಅವಕಾಶ ಇದೆ. ಪ್ರಸ್ತುತ, ಸೇನೆಯ ವೈದ್ಯಕೀಯ ಮತ್ತು ದೈಹಿಕ ಮಾನದಂಡಗಳು ಮಾನ್ಯವಾಗಿರುತ್ತವೆ.
ವೇತನ ವಿವರ: ಮೊದಲ ವರ್ಷದಲ್ಲಿ, ಭಾರತ ಸರ್ಕಾರವು ಪ್ರತಿ ತಿಂಗಳು 21 ಸಾವಿರ ರೂಪಾಯಿಗಳನ್ನು ವೇತನವಾಗಿ ಪಾವತಿಸುತ್ತದೆ. ಎರಡನೇ ವರ್ಷದಲ್ಲಿ ಪ್ರತಿ ತಿಂಗಳು 23 ಸಾವಿರದ 100 ಮತ್ತು ಮೂರನೇ ತಿಂಗಳು 25 ಸಾವಿರದ 580 ಮತ್ತು ನಾಲ್ಕನೇ ವರ್ಷದಲ್ಲಿ 28 ಸಾವಿರ ರೂಪಾಯಿ ವೇತನವನ್ನು ನೀಡಲಾಗುವುದು, ಆ ಯುವಕರು ನಿವೃತ್ತರಾಗುತ್ತಾರೆ.
ಇದನ್ನೂ ಓದಿ: ಕೇಂದ್ರದ ಅಗ್ನಿಪಥ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ಹುಟ್ಟುಹಾಕಲು ಕಾರಣವೇನು?