ಪಾಟ್ನಾ (ಬಿಹಾರ): ಮುಂಗಾರು ಅಧಿವೇಶನದ ಮೂರನೇ ದಿನವೂ ಬಿಹಾರ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಯಿತು. ತೇಜಸ್ವಿ ಯಾದವ್ ರಾಜೀನಾಮೆಗೆ ಪ್ರತಿಪಕ್ಷದವರು ಪಟ್ಟು ಹಿಡಿದರು. ಬುಧವಾರ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಮತ್ತೊಮ್ಮೆ ಕುರ್ಚಿಗಳನ್ನು ತೂರಾಡಿದರು. ಅಗ್ವಾನಿ ಸೇತುವೆ ಕುಸಿತದ ತನಿಖೆಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಚಿವ ತೇಜಸ್ವಿ ಯಾದವ್ ಉತ್ತರಿಸಿದರು. ಈ ವೇಳೆ, ಬಿಜೆಪಿ ಶಾಸಕರ ಗದ್ದಲ ಮುಂದುವರಿಯಿತು. ಸ್ಪೀಕರ್ ಸದನದ ಕಲಾಪವನ್ನು ನಾಳೆಗೆ ಮುಂದೂಡಿದರು.
ತೇಜಸ್ವಿ ರಾಜೀನಾಮೆಗೆ ಬಿಜೆಪಿ ಪಟ್ಟು: ಇಂದು ಸದನದ ಕಲಾಪ ಆರಂಭವಾದಾಗ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಉತ್ತರಿಸಲು ಎದ್ದು ನಿಂತರು. ಈ ವೇಳೆ, ಬಿಜೆಪಿ ಶಾಸಕರು ತೇಜಸ್ವಿ ಅವರನ್ನು ವಿರೋಧಿಸಿ ಗಲಾಟೆ ಆರಂಭಿಸಿದರು. ಬಿಜೆಪಿ ಶಾಸಕರು ಮತ್ತೊಮ್ಮೆ ಸದನದಲ್ಲಿ ಕುರ್ಚಿ ತೂರಾಡಿದರು. ಸದನದ ಬಾವಿಗಿಳಿದು ಪೋಸ್ಟರ್ ಎಸೆದರು. ಬಳಿಕ ಪೋಸ್ಟರ್ ತೆಗೆಯುವಂತೆ ಸ್ಪೀಕರ್ ಮಾರ್ಷಲ್ಗಳಿಗೆ ಆದೇಶಿಸಿದರು.
ಸದನ ನಾಳೆಗೆ ಮುಂದೂಡಿಕೆ: ಬಿಜೆಪಿ ಗದ್ದಲದ ನಂತರ ಸದನದಲ್ಲಿ ಪೀಠ ಏರಿದ ಬಿಜೆಪಿ ಸದಸ್ಯರಿಗೆ ಸ್ಪೀಕರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಇಂತಹ ವರ್ತನೆ ಸರಿಯಲ್ಲ ಎಂದು ಸ್ಪೀಕರ್ ಹೇಳಿದರು. ನೀವು ನಿಮ್ಮ ಸ್ಥಳಗಳಲ್ಲಿ ಕುಳಿತುಕೊಳ್ಳದಿದ್ದರೆ, ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಇಷ್ಟಾದರೂ ಬಿಜೆಪಿ ಶಾಸಕ ಸುಮ್ಮನಿರಲಿಲ್ಲ. ಗದ್ದಲವನ್ನು ಕಂಡ ಸ್ಪೀಕರ್ ಸದನದ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.
'10 ಲಕ್ಷ ಉದ್ಯೋಗ ಏನಾಯಿತು?': ಇದಕ್ಕೂ ಮುನ್ನ ಸದನದಲ್ಲಿ ಪ್ರತಿಪಕ್ಷ ನಾಯಕ ವಿಜಯ ಸಿನ್ಹಾ ಮಾತನಾಡಿ,''ಮೊದಲ ಸಂಪುಟ ಸಭೆಯಲ್ಲಿ 10 ಲಕ್ಷ ಉದ್ಯೋಗ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಇಂದು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ನಿತೀಶ್ ಕುಮಾರ್ ಅವರ ಕ್ರಮಕ್ಕೆ ಇಡೀ ದೇಶವೇ ಆಕ್ರೋಶಗೊಂಡಿದೆ. ಆದರೆ, ಸಿಎಂ ಭ್ರಷ್ಟರ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಿಜಯ್ ಸಿನ್ಹಾ ಆರೋಪಿಸಿದರು.
ಮುಂಗಾರು ಅಧಿವೇಶನ 5 ದಿನ: ಮತ್ತೊಂದೆಡೆ, ತೇಜಸ್ವಿ ಯಾದವ್ ಅವರಿಂದ ರಾಜೀನಾಮೆ ಪಡೆಯದ ನಿತೀಶ್ ಕುಮಾರ್ ಅವರ ವಿರುದ್ಧ ಬಿಜೆಪಿ ಗರಂ ಆಗಿದೆ. ಜುಲೈ 13ರಂದು ಬಿಜೆಪಿ ಕೂಡ ವಿಧಾನಸಭೆ ಯಾತ್ರೆ ಘೋಷಣೆ ಮಾಡಿದೆ. ಬಿಹಾರ ವಿಧಾನಸಭೆಯ ಮುಂಗಾರು ಅಧಿವೇಶನವು 5 ದಿನಗಳವರೆಗೆ ಇರುತ್ತದೆ. ಈವರೆಗೆ ಎರಡು ದಿನದಲ್ಲಿ ಸಾರ್ವಜನಿಕರ ಒಂದು ಪ್ರಶ್ನೆಗೂ ಸದನದಲ್ಲಿ ಉತ್ತರ ಸಿಕ್ಕಿಲ್ಲ. ಸದನದ ಕಲಾಪ ಸಂಪೂರ್ಣ ಕೋಲಾಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಕೂಗಿನ ಮಧ್ಯೆಯೇ ರಾಹುಲ್, ಖರ್ಗೆಗೆ ಉತ್ತರಾಖಂಡದ 5 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿ..