ಜೈಪುರ (ರಾಜಸ್ಥಾನ): ಖದೀಮರಿಗೆ ಕಳ್ಳತನ ಮಾಡಲು ಯಾರ ಮನೆಯಾದರೇನು?. ಕಳವು ಮಾಡುವಾಗ ಅವರ ಕೈಗೆ ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು. ಹೌದು, ಇಂತಹದ್ದೇ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸಂಸದರೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿ ಅಪಾರ ಪ್ರಮಾಣದ ನಗ ಮತ್ತು ನಾಣ್ಯ ದೋಚಿದ್ದಾರೆ. ಅಚ್ಚರಿಯ ವಿಷಯ ಎಂದರೆ ಸಂಸದರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲೇ ಪೊಲೀಸ್ ಠಾಣೆ ಇದೆಯಂತೆ!.
ಇದನ್ನೂ ಓದಿ: ಗಿರವಿ ಇರಿಸಿದ್ದ ಚಿನ್ನದೊಂದಿಗೆ ಪರಾರಿಯಾಗಿದ್ದ ಅಂಗಡಿ ಮಾಲೀಕನ ಬಂಧನ
ಜೈಪುರದಲ್ಲಿರುವ ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದ (ಆರ್‌ಎಲ್‌ಪಿ) ಮುಖ್ಯಸ್ಥ ಮತ್ತು ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ನಿವಾಸದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮನೆಗೆ ನುಗ್ಗಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಎಂಪಿ ಬೇನಿವಾಲ್ ಅವರೇ ತಮ್ಮ ಟ್ವಿಟರ್ ಖ್ಯಾತೆನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಜಲುಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಸಂಸದರ ಮನೆಯಲ್ಲಿ ಏನೆಲ್ಲ ಕಳವು?: ಸಂಸದರ ದೂರಿನ ಪ್ರಕಾರವೇ ಬೆಲೆಬಾಳುವ ಪುರಾತನ ವಸ್ತುಗಳು, ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ. ಕಳ್ಳರು ಮನೆಗೆ ನುಗ್ಗಿ 1.5 ಲಕ್ಷ ರೂ. ನಗದು, ನಾಲ್ಕು ಚಿನ್ನದ ಬಳೆಗಳು, ನಾಲ್ಕು ಉಂಗುರಗಳು, ಬೆಳ್ಳಿ ನಾಣ್ಯಗಳು, ಪುರಾತನ ವಸ್ತುಗಳು ಮತ್ತು ಅಡುಗೆ ಮನೆಯ ವಸ್ತುಗಳನ್ನೂ ಖದೀಮರು ಕದ್ದೊಯ್ದಿದ್ದಾರೆ ಎಂದು ಬೇನಿವಾಲ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಜನ ಸಾಮಾನ್ಯರ ಗತಿಯೇನು?: ಇದೇ ವೇಳೆ ಮನೆಯಲ್ಲಿ ಕಳ್ಳತನವಾದ ನಂತರ ಪೊಲೀಸ್ ಇಲಾಖೆಯ ದಕ್ಷತೆ ಬಗ್ಗೆಯೂ ಸಂಸದ ಬೇನಿವಾಲ್ ಪ್ರಶ್ನೆ ಎತ್ತಿದ್ದಾರೆ. ನಮ್ಮ ಮನೆಯು ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದೆ. ಜೈಪುರ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಸಂಸದರ ಮನೆಯಲ್ಲೇ ಕಳ್ಳತನ ಆಗುತ್ತಿದೆ. ಇನ್ನೂ ಜನಸಾಮಾನ್ಯರ ಗತಿಯೇನು ಕಿಡಿಕಾರಿದ್ದಾರೆ.
ನಿರ್ಭಯವಾಗಿ ಅಪರಾಧ ಎಸಗುತ್ತಿದ್ದಾರೆ: ಅಲ್ಲದೇ, ಕಳ್ಳತನದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸಂಸದರು, ಈ ಬಗ್ಗೆ ಗೃಹ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿಗಳಿಗೂ ದೂರು ನೀಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಕಳ್ಳರು ಮತ್ತು ಕ್ರಿಮಿನಲ್‌ಗಳು ನಿರ್ಭಯವಾಗಿ ಅಪರಾಧ ಎಸಗುತ್ತಿದ್ದಾರೆ ಎಂದೂ ತಮ್ಮ ಟ್ವೀಟ್‌ನಲ್ಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಘತ್ತರಗಿ ಭಾಗಮ್ಮ ದೇವಸ್ಥಾನದಲ್ಲಿ ಕಳ್ಳತನ.. ಚಿನ್ನಾಭರಣ, ಹಣ ಕದ್ದು ಪರಾರಿ
ಇತ್ತ, ಸಂಸದರ ಮನೆಯಲ್ಲಿ ದರೋಡೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ಜೊತೆಗೆ ಸ್ಥಳದಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ಶೀಘ್ರವೇ ದುಷ್ಕರ್ಮಿಗಳನ್ನು ಹಿಡಿಯಲಾಗುವುದು ಎಂದು ಜಲುಪುರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಶಾಸಕರ ಸ್ಕಾರ್ಪಿಯೋ ಕಳವು: ಈ ಹಿಂದೆ ಜುಲೈ 16ರಂದು ಆರ್‌ಎಲ್‌ಪಿ ಪಕ್ಷದ ಶಾಸಕ ಭಾಯಿ ನಾರಾಯಣ ಬೇನಿವಾಲ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ವಾಹನ ಕಳ್ಳತನವಾಗಿತ್ತು. ಎಂಎಲ್ಎ ಎಂದು ಸ್ಟಿಕ್ಕರ್ ಇರುವ ಕಾರನ್ನೇ ಖದೀಮರು ಕಳವು ಮಾಡಿದ್ದರು. ಇದಾದ ಎರಡು ದಿನಗಳ ನಂತರ ಜೋಧಪುರದಲ್ಲಿ ಈ ಕಾರು ಪತ್ತೆಯಾಗಿತ್ತು.
ಇದನ್ನೂ ಓದಿ: ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಪೊಲೀಸರ ಇನ್ನೋವಾ ಕಾರನ್ನೇ ಕದ್ದ ಖದೀಮರು