ಹಜಾರಿಬಾಗ್ (ಜಾರ್ಖಂಡ್): ಎಟಿಎಂ ಬಳಿ ನಿಲ್ಲಿಸಿದ್ದ ಪಿಕಪ್ ವಾಹನವನ್ನು ಕದ್ದು, ಅದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಅನ್ನು ಕಳ್ಳರು ಕಿತ್ತುಕೊಂಡು ತೆಗೆದುಕೊಂಡು ಹೋಗಿರುವ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾರ್ಸೋಟ್‌ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಎಟಿಎಂನಲ್ಲಿದ್ದ ಹಣದ ಬಗ್ಗೆ ಮಾಹಿತಿ ಇಲ್ಲ: ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ತಂಡದೊಂದಿಗೆ ಗುರುವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಜಿಟಿ ರಸ್ತೆಯ ಬಾರ್ಸೋಟ್ ಚೌಕ್ ಬಳಿ ಎಟಿಎಂ ಇತ್ತು. ಮನೋಜ್ ಕುಮಾರ್ ಅಲಿಯಾಸ್ ಮಣಿಲಾಲ್ ಎಂಬುವವರ ಮನೆಯ ಪಕ್ಕದಲ್ಲಿ ಅವರಿಗೆ ಸೇರಿದ ಜಾಗದಲ್ಲಿ ಎಟಿಎಂ ಅಳವಡಿಸಲಾಗಿತ್ತು. ಎಟಿಎಂ ಯಂತ್ರ ಕೊಂಡೊಯ್ಯಲು ಕದ್ದ ಕಾರು ಕೂಡಾ ಅವರದ್ದೇ ಆಗಿದೆ. ಕಳ್ಳರು, ಮೊದಲು ಪಕ್ಕದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವನ್ನು ಕದ್ದಿದ್ದಾರೆ. ನಂತರ ಎಸ್‌ಬಿಐ ಎಟಿಎಂ ಅನ್ನು ಕಿತ್ತು ವಾಹನಕ್ಕೆ ಲೋಡ್ ಮಾಡಿ ಕೊಂಡೊಯ್ದಿದ್ದಾರೆ. ಎಟಿಎಂ ಯಂತ್ರದ ಒಳಗೆ ಎಷ್ಟು ನಗದು ಇತ್ತು ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ಬೆಳಗ್ಗೆ ಎದ್ದು ನೋಡಿದಾಗ ಮನೆಯ ಹೊರಗಿದ್ದ ಕಾರು, ಎಟಿಎಂ ಕಾಣೆ: ಮನೋಜ್ ಕುಮಾರ್ ಅವರು ಗುರುವಾರ ಬೆಳಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಾಣೆಯಾಗಿತ್ತು. ಜೊತೆಗೆ ಮನೆ ಪಕ್ಕದಲ್ಲೇ ಇರುವ ಎಟಿಎಂನ ಶಟರ್ ಒಡೆದು ಹಾಕಲಾಗಿತ್ತು. ಹೋಗಿ ನೋಡಿದಾಗ ಒಳಗಡೆ ಎಟಿಎಂ ಇಲ್ಲದೇ ಇರುವುದನ್ನು ಗಮನಿಸಿದ ಮನೋಜ್ ಕುಮಾರ್ ಅವರು ಸ್ಥಳೀಯ ಮುಖಂಡ ಮೋತಿಲಾಲ್ ಚೌಧರಿ ಮತ್ತು ಬರ್ಹಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಠಾಣಾ ಪ್ರಭಾರಿ ಇನ್ಸ್ಪೆಕ್ಟರ್ ರೋಹಿತ್ ಕುಮಾರ್ ಸಿಂಗ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು.
ಸಿಸಿಟಿವಿ ಕ್ಯಾಮೆರಾಕ್ಕೆ ರಾಸಾಯನಿಕ ಬಣ್ಣ ಎರಚಿದ್ದ ಕಳ್ಳರು: ಎಸ್‌ಡಿಒ ಪೂನಂ ಕುಜೂರ್ ಮತ್ತು ಎಸ್‌ಡಿಪಿಒ ನಜೀರ್ ಅಖ್ತರ್ ಕೂಡ ಎಟಿಎಂ ಕಳ್ಳತನವಾಗಿರುವ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ತನಿಖೆಗೆ ನಡೆಸಿದ್ದಾರೆ. ಎಟಿಎಂ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಚಾಲಾಕಿ ದುಷ್ಕರ್ಮಿಗಳು ರಾಸಾಯನಿಕ ಬಣ್ಣ ಎರಚಿ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಎಟಿಎಂನ ಸಂಬಂಧಪಟ್ಟ ಏಜೆನ್ಸಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ, ಜಾರ್ಖಂಡ್‌ನ ರಾಮಗಢ, ಹಜಾರಿಬಾಗ್, ಪಲಮು, ಛತ್ರ, ಧನ್‌ಬಾದ್ ಮತ್ತು ರಾಂಚಿಯಲ್ಲಿ ಸುಮಾರು ಹನ್ನೆರಡು ಎಟಿಎಂಗಳನ್ನು ಕಿತ್ತು ಹೊತ್ತೊಯ್ದಿರುವ ಘಟನೆಗಳು ವರದಿಯಾಗಿವೆ.
ಇದನ್ನೂ ಓದಿ: ATM theft attempt: ಶಿವಮೊಗ್ಗ: ಕದ್ದು ತಂದ ಜೆಸಿಬಿ ಮೂಲಕ ಎಟಿಎಂ ಕಳ್ಳತನಕ್ಕೆ ಯತ್ನ!