ಚಂದೌಲಿ(ಉತ್ತರಪ್ರದೇಶ): ಕಳ್ಳರು ಚಿನ್ನ, ಬೆಳ್ಳಿ, ನಗದು ಲೂಟಿ ಮಾಡುವುದನ್ನು ನೋಡಿದ್ದೇವೆ. ಆದರೆ, ಉತ್ತರಪ್ರದೇಶದಲ್ಲಿ 24 ಕ್ಕೂ ಅಧಿಕ ಕೋಳಿಗಳನ್ನು ಕದ್ದ ಅಚ್ಚರಿಯ ಘಟನೆ ನಡೆದಿದೆ. ಹೊಸ ವರ್ಷಾಚರಣೆಯ ಮೊದಲ ದಿನವೇ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕೋಳಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ.
ಚಂದೌಲಿ ಜಿಲ್ಲೆಯ ಕಾಜಿಪುರದಲ್ಲಿ ವ್ಯಕ್ತಿಯೊಬ್ಬ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದ. ತರಹೇವಾರಿ ಜಾತಿಯ ಕೋಳಿಗಳು ಈತನಲ್ಲಿದ್ದವು. ಹೊಸ ವರ್ಷದ ಕೂಟಕ್ಕಾಗಿ ಇವುಗಳ ಮೇಲೆ ಕಣ್ಣಾಕಿದ ಖದೀಮರು 24 ಕ್ಕೂ ಅಧಿಕ ಕೋಳಿಗಳನ್ನು ರಾತ್ರೋರಾತ್ರಿ ಎಗರಿಸಿದ್ದಾರೆ. ಬೆಳಗ್ಗೆ ಮಾಲೀಕ ಕೋಳಿ ಫಾರ್ಮ್ಗೆ ಬಂದು ನೋಡಿದಾಗ ಅವು ಕಳವಾಗಿದ್ದು ಗೊತ್ತಾಗಿದೆ.
ಫಾರ್ಮ್ನಲ್ಲಿ ಕೋಳಿಗಳು ಕಾಣುತ್ತಿಲ್ಲ ಎಂದು ಆತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. 40 ಕೆಜಿ ತೂಗುವ 24 ಕ್ಕೂ ಅಧಿಕ ಕೋಳಿಗಳನ್ನು ಪಾರ್ಟಿಕೋರರು ಕಳ್ಳತನ ಮಾಡಿದ್ದಾರೆ ಎಂದು ಆತ ದೂರು ನೀಡಿದ್ದಾನೆ. ಇದು ಪೊಲೀಸರಿಗೆ ಅಚ್ಚರಿ ಮೂಡಿಸಿದ್ದು, ಅಷ್ಟು ಪ್ರಮಾಣದ ಕೋಳಿಗಳನ್ನು ಕದ್ದಿದ್ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಕಟ್ಟಡ ಸಾಮಗ್ರಿಗಳ ಅಂಗಡಿಯನ್ನು ಲೂಟಿ ಮಾಡಿದ್ದರು. ಇದಲ್ಲದೇ ಸರ್ಕಾರಕ್ಕೆ ಸೇರಿದ ಮದ್ಯದಂಗಡಿಗೂ ಕನ್ನ ಹಾಕಿದ್ದ ಖದೀಮರು ದುಬಾರಿ ಪ್ರಮಾಣದ ಮದ್ಯ ಕಳ್ಳತನ ಮಾಡಿದ್ದರು.
ಓದಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ.. ಬೆಚ್ಚಿಬಿದ್ದ ಬೆಂಗಳೂರು