ದಕ್ಷಿಣ 24 ಪರಗಣ (ಪಶ್ಚಿಮ ಬಂಗಾಳ): ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 200ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರ ಪಟ್ಟಣದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪಿಎಂ ಮೋದಿ, ಕೆಲ ವಾರಗಳ ಹಿಂದೆ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಂಗಾಳದ ಜನರು ಹೇಳುತ್ತಿದ್ದರು. ಈ ಮಾತು ದೇವರಿಗೆ ಕೇಳಿದೆ ಎಂದೆನಿಸುತ್ತದೆ, ಮೊದಲ ಹಂತದ ಚುನಾವಣೆಯಿಂದಲೇ ಇದು ಸ್ಪಷ್ಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾರರು ಹಕ್ಕು ಚಲಾಯಿಸುತ್ತಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಅಲೆಯಿದ್ದು, 200ಕ್ಕೂ ಹೆಚ್ಚು ಸ್ಥಾನಗಳು ನಮಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ದೀದಿಗೆ 'ತಿಲಕ' ಮತ್ತು 'ಕೇಸರಿ' ಉಡುಪುಗಳಲ್ಲಿ ಸಮಸ್ಯೆ'
ಈ ಮೊದಲು ದೀದಿಗೆ 'ಜೈ ಶ್ರೀರಾಮ್' ಘೋಷಣೆ, ದುರ್ಗಾ ವಿಗ್ರಹಗಳ ನಿಮಜ್ಜನದೊಂದಿಗೆ ಸಮಸ್ಯೆಯಿತ್ತು. ಆದರೆ ಈಗ ಅವರಿಗೆ 'ತಿಲಕ' ಮತ್ತು 'ಕೇಸರಿ' ಉಡುಪುಗಳಲ್ಲಿ ಸಮಸ್ಯೆಯಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮೋದಿ ಟಾಂಗ್ ನೀಡಿದರು.
ದೀದಿ, ನಿಮಗೆ ಯಾರನ್ನಾದರೂ ನಿಂದಿಸುವ ಹಕ್ಕಿರಬಹುದು. ನನ್ನನ್ನು ನಿಂದಿಸಲು ಬಯಸುತ್ತೀರಿ, ನನ್ನನ್ನು ನಿಂದಿಸುತ್ತೀರಿ. ಆದರೆ ಜನರ ಭಕ್ತಿ ಮತ್ತು ರಾಮಕೃಷ್ಣ ಪರಮಹಂಸರು, ಚೈತನ್ಯ ಮಹಾಪ್ರಭು, ಮತ್ತು ಸ್ವಾಮಿ ವಿವೇಕಾನಂದರ ಗುರುತನ್ನು ನಿಂದಿಸಲು ನಾನು ಬಿಡುವುದಿಲ್ಲ. ಬಾಂಗ್ಲಾದೇಶ ಭೇಟಿ ವೇಳೆ ಜೆಶೋರೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕೆ ದೀದಿ ಕೋಪಗೊಂಡಿದ್ದರು. ದೇವಸ್ಥಾನಕ್ಕೆ ಭೇಟಿ ನೀಡುವುದು ತಪ್ಪೇ? ಎಂದು ಮೋದಿ ಪ್ರಶ್ನಿಸಿದರು.
ತೃಣಮೂಲ ಕೂಲ್ ಅಲ್ಲ 'ಶೂಲ್'
'ಕೂಲ್ ಕೂಲ್ ತೃಣಮೂಲ' ಎಂದು ದೀದಿ ಹೇಳುವುದನ್ನು ನಾನು ಕೇಳಿದ್ದೆ. ಆದರೆ ತೃಣಮೂಲ ತಂಪಾಗಿಲ್ಲ, ಅದು ಕೂಲ್ ಅಲ್ಲ 'ಶೂಲ್' (ತ್ರಿಶೂಲ). ಬಂಗಾಳದ ಜನರಿಗೆ ಅಸಹನೀಯ ನೋವನ್ನು ನೀಡುವ ಶೂಲ್ ಆಗಿದೆ ಎಂದು ಮೋದಿ ವ್ಯಂಗ್ಯವಾಡಿದರು.
ಕಳೆದ ತಿಂಗಳು ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾಗಿದ್ದ ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋಭಾ ಮಜುಂದಾರ್ (85) ಮೊನ್ನೆ ಮೃತಪಟ್ಟಿದ್ದರು. ಈ ಬಗ್ಗೆ ಮಾತನಾಡಿದ ಪ್ರಧಾನಿ, ಬಂಗಾಳದ ಮಗಳು ಶೋಭಾ ಮಜುಂದಾರ್ ಅವರಿಗೆ ಗೌರವ ಸಲ್ಲಿಸಲು ಬಯಸುತ್ತೇನೆ. ಅವರು ಟಿಎಂಸಿ ಕಾರ್ಯಕರ್ತರಿಂದ ಚಿತ್ರಹಿಂಸೆಗೊಳಗಾದ ಬಂಗಾಳದ ತಾಯಂದಿರು ಮತ್ತು ಸಹೋದರಿಯರ ಪ್ರತಿನಿಧಿಯಾಗಿದ್ದರು ಎಂದು ಹೇಳಿದರು.