ಅಹಮದಾಬಾದ್(ಗುಜರಾತ್): ಭಾರತ ನಿಂತ ನೀರು ಆಗಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ನಾವು ಸ್ವಾವಲಂಬಿಯಾಗಬೇಕಾಗಿದೆ. ಸದ್ಯದ ಜಾಗತಿಕ ಪರಿಸ್ಥಿತಿ ಹೇಗಿದೆ ಎಂದರೆ, ಇಡೀ ಜಗತ್ತು ಇದೀಗ ಆತ್ಮನಿರ್ಭರ್ ಆಗುವುದು ಹೇಗೆ ಎಂದು ಯೋಚನೆ ಮಾಡ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ನ ಮೊರ್ಬಿಯಲ್ಲಿ ನಿರ್ಮಾಣಗೊಂಡಿರುವ 108 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಸ್ತಬ್ದವಾಗಿರಲು ಸಾಧ್ಯವಿಲ್ಲ. ಜಾಗತಿಕವಾಗಿ ಎಲ್ಲರೂ ಆತ್ಮನಿರ್ಭರ್ ಆಗುವುದು ಹೇಗೆ ಎಂಬುದರ ಬಗ್ಗೆ ಯೋಚನೆ ಮಾಡ್ತಿದ್ದಾರೆ. ಹೀಗಾಗಿ, ನಾವೆಲ್ಲರೂ ಸ್ವಾವಲಂಬಿಗಳಾಗಬೇಕು ಎಂದರು.
ಸ್ವಾಮೀಜಿಗಳು, ಸಂತರು ಸ್ಥಳೀಯ ಉತ್ಪನ್ನಗಳನ್ನ ಮಾತ್ರ ಖರೀದಿ ಮಾಡುವಂತೆ ದೇಶದ ಜನರಿಗೆ ಮನವಿ ನೀಡುವಂತೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಇದು ಸ್ಥಳೀಯರ ಉದ್ಯೋಗದ ಹಕ್ಕಾಗಿದೆ. ನಮ್ಮ ಮನೆಗಳಲ್ಲಿ, ನಮ್ಮ ಜನರು ತಯಾರಿಸಿರುವ ವಸ್ತು ಮಾತ್ರ ಬಳಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಕೆಲಸ ಸರಿಯಾದ ದಿಕ್ಕಿನಲ್ಲಿ ನಡೆದರೆ, ನಮ್ಮ ಜನರಿಗೆ ನಿರುದ್ಯೋಗ ಸಮಸ್ಯೆ ಉಂಟಾಗುವುದಿಲ್ಲ ಎಂದರು.
ಇದನ್ನೂ ಓದಿ: 108 ಅಡಿಯ ಹನುಮಾನ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
ವಿದೇಶಿ ನಿರ್ಮಿತ ವಸ್ತು ನಮಗೆ ಒಳ್ಳೆಯದನ್ನ ನೀಡಬಹುದು. ಆದರೆ, ನಮ್ಮ ಜನರ ಶ್ರಮದ ಭಾವನೆ ಹೊಂದಲು ಸಾಧ್ಯವಿಲ್ಲ. ಅದರಲ್ಲಿ ನಮ್ಮ ಭೂಮಿ ತಾಯಿ ಪರಿಮಳ ಇರುವುದಿಲ್ಲ. ಮುಂದಿನ 25 ವರ್ಷಗಳಲ್ಲಿ ನಾವು ಕೇವಲ ಸ್ಥಳೀಯ ಉತ್ಪನ್ನ ಬಳಸಿದರೆ, ನಮ್ಮ ಜನರಿಗೆ ನಿರುದ್ಯೋಗ ಸಮಸ್ಯೆ ಉಂಟಾಗಲ್ಲ ಎಂದಿದ್ದಾರೆ.