ನವದೆಹಲಿ : ಬಲವಂತದ ಅಥವಾ ಮೋಸದ ಮತಾಂತರ ಮತ್ತು ಲವ್ ಜಿಹಾದ್ ವಿರುದ್ಧ ಕಠಿಣ ಮತ್ತು ಶಾಶ್ವತ ಕಾನೂನು ರಚನೆ ಮಾಡುವ ಅವಶ್ಯಕತೆಯಿದೆ ಎಂದು ಸಂಸ್ಕೃತಿ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
ಮಧ್ಯಪ್ರದೇಶದ ಕ್ಯಾಬಿನೆಟ್ ಮಂಗಳವಾರ ಅಂಗೀಕರಿಸಿದ ಲವ್ ಜಿಹಾದ್ ವಿರುದ್ಧದ ಕಾನೂನು 2020ರ ಧರ್ಮ ಸ್ವತಂತ್ರ (ಧಾರ್ಮಿಕ ಸ್ವಾತಂತ್ರ್ಯ) ಸುಗ್ರೀವಾಜ್ಞೆ ಬಗ್ಗೆ ಮಾತನಾಡಿದ ಪಟೇಲ್, ಭ್ರಮೆ, ಭಯ, ದುರಾಸೆ ಮತ್ತು ಮೋಸದಿಂದ ಮತಾಂತರ ಮಾಡುವ ಪಿತೂರಿಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೊದಲಿನಿಂದಲೂ ಹೇಳುತ್ತಿದೆ ಎಂದಿದ್ದಾರೆ.
"ಮಾತುಕತೆಯ ಮೂಲಕ ವಿಷಯಗಳು ಬಗೆಹರಿಯದಿದ್ದಾಗ, ಕಾನೂನು ಮಾಡಬೇಕಾಗಿರುವುದು ಸಹಜ. ಚರ್ಚೆಯು ದಶಕಗಳಿಂದ ನಡೆಯುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ, ಮತಾಂತರದ ಬಗ್ಗೆ ಸಮಾಜದಲ್ಲಿ ನಿರಂತರ ಚರ್ಚೆಗಳು ನಡೆಯುತ್ತಿವೆ.
ಈ ಬಗ್ಗೆ ಜನರನ್ನು ಕೇಳಿದ್ರೆ, ಅವರೂ ಸಹ ಈ ಕಾನೂನನ್ನು ಬೆಂಬಲಿಸುತ್ತಾರೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ. ಕಾನೂನಿನ ಮೂಲಕ ಸಮುದಾಯವನ್ನು ಗುರಿಯಾಗಿಸುವ ಬಗ್ಗೆ ಪ್ರತಿಪಕ್ಷಗಳ ಆರೋಪದ ಕುರಿತು ಪ್ರಶ್ನಿಸಿದ್ದಕ್ಕೆ, ಪಟೇಲ್ ತಮ್ಮ ಪಕ್ಷವು 'ಲವ್-ಜಿಹಾದ್' ಎಂಬ ಪದವನ್ನು ರಚಿಸಿಲ್ಲ ಎಂದಿದ್ದಾರೆ.
"ಈ ಕಾನೂನಿನ ಬಗ್ಗೆ ಚರ್ಚೆಗಳು ಪ್ರಾರಂಭವಾದಾಗ, ಅದನ್ನು ಮಾಡುವವರ ಮನಸ್ಸಿನಲ್ಲಿ ಭಯವಿದೆ. ಭಯ ಇರಬೇಕು ಎಂದು ನಾನು ಭಾವಿಸುತ್ತೇನೆ. ನೀವು ಮತಾಂತರವನ್ನು ಮೋಸದಿಂದ ಮಾಡಿದ್ರೆ, ಅದನ್ನು ಕೆಲವು ಪಿತೂರಿಯಡಿಯಲ್ಲಿ ಮಾಡಿದರೆ ನೀವು ಭಯಪಡಬೇಕು" ಎಂದು ಹೇಳಿದ್ದಾರೆ.
ವಿಶೇಷವೆಂದರೆ, ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಸುಗ್ರೀವಾಜ್ಞೆ -2020 ರಲ್ಲಿ, ಬಲವಂತವಾಗಿ ಮತಾಂತರ ಮಾಡಿದ್ರೆ, ಅಥವಾ ಲವ್ ಜಿಹಾದ್ ಆರೋಪದ ಮೇಲೆ 10 ವರ್ಷಗಳ ಶಿಕ್ಷೆ ಮತ್ತು ಒಂದು ಲಕ್ಷ ರೂ.ಗಳ ದಂಡ ವಿಧಿಸಲು ಅವಕಾಶವಿದೆ.
ಪ್ರತಿಪಕ್ಷಗಳ ನಿರಂತರ ಟೀಕೆಗಳ ನಡುವೇಯೂ ಮಧ್ಯಪ್ರದೇಶಕ್ಕೆ ಮುಂಚಿತವಾಗಿ, ಬಿಜೆಪಿ ಆಳ್ವಿಕೆಯ ಇತರ ಹಲವು ರಾಜ್ಯಗಳು ಇಂತಹ ಕಾನೂನುಗಳನ್ನು ಅಂಗೀಕರಿಸಿವೆ ಎಂದು ಮಾಹಿತಿ ನೀಡಿದ್ದಾರೆ.