ನವದೆಹಲಿ: ಮಹಾಮಾರಿ ಕೊರೊನಾ ವೈರಸ್ನ ಎರಡನೇ ಅಲೆಯಿಂದ ತತ್ತರಿಸಿ, ಇದೀಗ ಚೇತರಿಸಿಕೊಂಡಿರುವ ಭಾರತಕ್ಕೆ ಮತ್ತೊಂದು ಆತಂಕ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ಒಮಿಕ್ರಾನ್ ಈಗಾಗಲೇ ಭಾರತಕ್ಕೆ ಲಗ್ಗೆ ಹಾಕಿದ್ದು, ಇದರ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಕೋವಿಡ್ ಕಾರ್ಯಪಡೆಯ ಅಧ್ಯಕ್ಷರಾಗಿರುವ ಡಾ. ವಿ.ಕೆ.ಪಾಲ್ ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಬ್ರಿಟನ್ನಲ್ಲಿ ಸೋಂಕು ದೃಢಪಡುತ್ತಿರುವ ರೀತಿ ಭಾರತದಲ್ಲೂ ಹರಡಲು ಶುರುವಾದರೆ ಪ್ರತಿದಿನ 14 ಲಕ್ಷ ಸೋಂಕಿತ ಪ್ರಕರಣ ದಾಖಲಾಗಲಿವೆ ಎಂಬ ಎಚ್ಚರಿಕೆ ಗಂಟೆ ನೀಡಿದ್ದಾರೆ.
ಬ್ರಿಟನ್ನಲ್ಲಿ ಪ್ರತಿದಿನ ಸರಾಸರಿ 1 ಲಕ್ಷ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಫ್ರಾನ್ಸ್ನಲ್ಲೂ ಹೆಚ್ಚಿನ ವೈರಸ್ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ಇದೇ ರೀತಿ ಭಾರತದಲ್ಲೂ ಸೋಂಕು ಕಾಣಿಸಿಕೊಳ್ಳಲು ಶುರುವಾದರೆ ನಮ್ಮ ದೇಶದಲ್ಲಿ ಪ್ರತಿದಿನ 14 ಲಕ್ಷ ಪ್ರಕರಣ ದಾಖಲಾಗಲಿವೆ ಎಂದಿದ್ದಾರೆ.
ಇದನ್ನೂ ಓದಿರಿ: ಬೆಂಗಳೂರು ಶಿವಾಜಿ ಪ್ರತಿಮೆ ವಿವಾದ: ಮಧ್ಯ ಪ್ರವೇಶಿಸುವಂತೆ ಪ್ರಧಾನಿಗೆ ಉದ್ಧವ್ ಠಾಕ್ರೆ ಪತ್ರ
ದೇಶದಲ್ಲಿ ಈಗಾಗಲೇ 126 ಒಮಿಕ್ರಾನ್ ಸೋಂಕಿತ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹಿಂದಿನ ಸೋಂಕುಗಳಿಗೆ ಹೋಲಿಕೆ ಮಾಡಿದಾಗ ಒಮಿಕ್ರಾನ್ ಗಂಭೀರವಾಗಿಲ್ಲ ಎಂದು ಜನರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ಆದರೆ ಜನರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು. ಕೊರೊನಾದ ಡೆಲ್ಟಾಗಿಂತಲೂ ಒಮಿಕ್ರಾನ್ ವೇಗವಾಗಿ ಹರಡಲಿದ್ದು, ಜನರು ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡುವಂತೆ ಮನವಿ ಮಾಡಿದೆ.
ಹೊಸ ವರ್ಷದ ಆಗಮಿಸುತ್ತಿದ್ದು, ಈ ವೇಳೆ ಸಭೆ, ಸಮಾರಂಭ ಹಾಗೂ ಅನಗತ್ಯ ಪ್ರಯಾಣದ ಮೇಲೆ ಬ್ರೇಕ್ ಹಾಕುವಂತೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದ್ದು, ಆದಷ್ಟು ಬೇಗ ಕೋವಿಡ್ ವ್ಯಾಕ್ಸಿನೇಷನ್ ಪಡೆದುಕೊಳ್ಳುವಂತೆ ಮನವಿ ಮಾಡಿದೆ.