ಆಗ್ರಾ(ಉತ್ತರ ಪ್ರದೇಶ): ತಾಜ್ ಮಹಲ್ನಲ್ಲೂ ದೇವಸ್ಥಾನ ಇದೆ ಎಂಬ ಬಗ್ಗೆ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿತ್ತು. ಈ ಹಿನ್ನೆಲೆ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಾಜ್ ಮಹಲ್‌ನ ನೆಲಮಾಳಿಗೆಯ 22 ಕೊಠಡಿಗಳಲ್ಲಿ ಯಾವುದೇ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಇಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದೆ. ಈ ಸಂಬಂಧ ಆರ್‌ಟಿಐಗೆ ಪ್ರತಿಕ್ರಿಯೆ ನೀಡಲಾಗಿದೆ.
ಸೆಲ್ಲಾರ್‌ನ ಮುಚ್ಚಿದ ಕೊಠಡಿಗಳನ್ನು ತೆರೆಯುವಂತೆ ಆಗ್ರಹಿಸಿ ಅಯೋಧ್ಯೆಯ ಬಿಜೆಪಿ ಮಾಧ್ಯಮ ಉಸ್ತುವಾರಿ ಡಾ. ರಜನೀಶ್ ಸಿಂಗ್ ಅವರು 7 ಮೇ 2022 ರಂದು ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ತಾಜ್ ಮಹಲ್‌ನ ನೆಲಮಾಳಿಗೆಯ 22 ಮುಚ್ಚಿದ ಕೊಠಡಿಗಳನ್ನು ತೆರೆಯಲು ಬೇಡಿಕೆ ಇತ್ತು. ತಾಜ್‌ಮಹಲ್‌ನ ನೆಲಮಾಳಿಗೆಯ ಮುಚ್ಚಿದ ಕೊಠಡಿಗಳಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿವೆ ಎಂದು ಶಂಕೆ ವ್ಯಕ್ತಪಡಿಸಿದ್ದರು.
ಈ ನಡುವೆ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರರು ತಾಜ್ಮಹಲ್ಗೆ ಸಂಬಂಧಿಸಿದಂತೆ ಆರ್‌ಟಿಐ ಮೂಲಕ ಎಎಸ್‌ಐನಿಂದ ಮಾಹಿತಿ ಕೇಳಿದ್ದರು. ಇದರಲ್ಲಿ ಎರಡು ಪ್ರಶ್ನೆಗಳಿದ್ದವು. ಅದರಲ್ಲಿ ತಾಜ್ ಮಹಲ್ ನಿರ್ಮಾಣವಾಗಿರುವ ಭೂಮಿ, ಆ ಜಾಗ ದೇವಸ್ಥಾನಕ್ಕೆ ಸೇರಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪುರಾವೆ ನೀಡಿ ಹಾಗೂ ಮುಚ್ಚಿದ 22 ಕೋಣೆಗಳ ನೆಲಮಾಳಿಗೆಯಲ್ಲಿ ಹಿಂದೂ ದೇವತೆಗಳ ವಿಗ್ರಹಗಳಿವೆಯೇ ಎಂಬುದು ಎರಡನೇ ಪ್ರಶ್ನೆಯಾಗಿತ್ತು.
ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಸಾಕೇತ್ ಎಸ್ ಗೋಖಲೆ ಅವರ ಆರ್‌ಟಿಐ ಪ್ರಶ್ನೆಗೆ ಎಎಸ್‌ಐ ಈ ಉತ್ತರವನ್ನು ಒಂದೇ ಸಾಲಿನಲ್ಲಿ ನೀಡಿದೆ. ಈ ಉತ್ತರವನ್ನು ಎಎಸ್ಐನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಚಂದ್ ಮೀನಾ ನೀಡಿದ್ದಾರೆ. ಮೊದಲ ಪ್ರಶ್ನೆಗೆ ಉತ್ತರವಾಗಿ ‘ಇಲ್ಲ’ ಎಂದು ಮಾತ್ರ ಬರೆದಿದ್ದಾರೆ. ಅದೇನೆಂದರೆ, ತಾಜ್ ಮಹಲ್ ಅನ್ನು ದೇವಸ್ಥಾನದ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ. ಎರಡನೇ ಪ್ರಶ್ನೆಯಲ್ಲಿ, ನೆಲಮಾಳಿಗೆಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳಿಲ್ಲ ಎಂದು ಉತ್ತರದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ : ಅಯೋಧ್ಯೆಯ ದೇವಾಲಯದಲ್ಲಿ ಮಲಗಿದ್ದವನ ಕತ್ತು ಸೀಳಿ ಕೊಂದ ಕಿರಾತಕರು